ADVERTISEMENT

ವಿಚಾರಣೆ ದೀರ್ಘವಾಗದಂತೆ ನೋಡಿಕೊಳ್ಳುವುದು ನ್ಯಾಯಾಲಯಗಳ ಕರ್ತವ್ಯ: ಸುಪ್ರೀಂ ಕೋರ್ಟ್

ಪಿಟಿಐ
Published 19 ಆಗಸ್ಟ್ 2022, 11:07 IST
Last Updated 19 ಆಗಸ್ಟ್ 2022, 11:07 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ಪ್ರಕರಣಗಳ ವಿಚಾರಣೆ ಪ್ರಕ್ರಿಯೆ ದೀರ್ಘವಾಗದಂತೆ ಖಾತ್ರಿಪಡಿಸುವುದು ವಿಚಾರಣಾ ನ್ಯಾಯಾಲಯಗಳ ಕರ್ತವ್ಯ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ನ್ಯಾಯಮೂರ್ತಿಗಳಾದ ಎಸ್‌.ಕೆ.ಕೌಲ್ ಹಾಗೂ ಎಂ.ಎಂ.ಸುಂದ್ರೇಶ್‌ ಅವರಿದ್ದ ನ್ಯಾಯಪೀಠವು, ಯಾವುದೇ ಕಕ್ಷಿದಾರರು ವಿಳಂಬ ತಂತ್ರ ಅನುಸರಿಸುವುದನ್ನು ತಡೆಗಟ್ಟಬೇಕು ಎಂದೂ ಸೂಚಿಸಿತು.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮೇಯರ್‌ವೊಬ್ಬರ ಕೊಲೆ ಮಾಡಿದವರು ತಪ್ಪಿಸಿಕೊಳ್ಳಲು ನೆರವಾದ ಆರೋಪ ಎದುರಿಸುತ್ತಿದ್ದ ವ್ಯಕ್ತಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಈ ಸೂಚನೆ ನೀಡಿತು.

ADVERTISEMENT

ಸಾಕ್ಷಿಗಳ ವಿಚಾರಣೆಯಲ್ಲಿ ಆಗುತ್ತಿರುವ ವಿಳಂಬದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಸಮಯ ಕಳೆದಂತೆ ಸಾಕ್ಷಿಗಳಿಂದ ಹೇಳಿಕೆ ಪಡೆಯುವ ಪ್ರಕ್ರಿಯೆಯಲ್ಲಿ ಸಾಕಷ್ಟು ಸಮಸ್ಯೆಗಳುಂಟಾಗುತ್ತವೆ ಎಂದು ಹೇಳಿತು.

‘ವ್ಯಕ್ತಿಯು ಕಳೆದ ಏಳು ವರ್ಷಗಳಿಂದ ಜೈಲಿನಲ್ಲಿದ್ದಾರೆ. ಇನ್ನೊಂದೆಡೆ, ಪ್ರಾಸಿಕ್ಯೂಷನ್‌ನಿಂದ ಸಾಕ್ಷಿಗಳಿಂದ ಹೇಳಿಕೆ ಪಡೆಯುವ ಪ್ರಕ್ರಿಯೆ ಇನ್ನೂ ಆರಂಭಗೊಂಡಿಲ್ಲ. ಏಳು ವರ್ಷಗಳು ಗತಿಸಿದ್ದರೂ ವಿಚಾರಣೆಯೇ ಆರಂಭವಾಗಿಲ್ಲ ಎಂಬುದನ್ನು ತಿಳಿದು ನಮಗೆ ಅಚ್ಚರಿಯಾಗಿದೆ. ಇದು ಒಪ್ಪತಕ್ಕದ್ದಲ್ಲ’ ಎಂದು ನ್ಯಾಯಮೂರ್ತಿಗಳು ಹೇಳಿದರು.

ಅರ್ಜಿದಾರಗೆ ಜಾಮೀನು ಮಂಜೂರು ಮಾಡಿದ ನ್ಯಾಯಪೀಠ, ‘ಸುಪ್ರೀಂಕೋರ್ಟ್‌ನ ಈ ಆದೇಶ ಕೈಸೇರಿದ ದಿನದಿಂದ ಒಂದು ವರ್ಷದ ಒಳಗಾಗಿ ವಿಚಾರಣಾ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿ ತೀರ್ಪು ನೀಡಬೇಕು’ ಎಂದು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.