ನವದೆಹಲಿ: ‘ಮತದಾನದ ಹಕ್ಕು ಪಡೆಯಲು ಆಧಾರ್ ಕಾರ್ಡ್ ಏಕೈಕ ಮಾನ್ಯವಾದ ದಾಖಲೆಯಾಗಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿಲ್ಲ. ಈ ವಿಚಾರದಲ್ಲಿ ವಿರೋಧ ಪಕ್ಷಗಳು ಅಪಪ್ರಚಾರದಲ್ಲಿ ತೊಡಗಿವೆ’ ಎಂದು ಬಿಜೆಪಿ ಭಾನುವಾರ ಟೀಕಿಸಿದೆ.
ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’(ಎಸ್‌ಐಆರ್) ವೇಳೆ, ಪಟ್ಟಿಯಿಂದ ತಮ್ಮ ಹೆಸರು ಕೈಬಿಡಲಾಗಿರುವ ಮತದಾರರು ಇತರ ಮಾನ್ಯ ದಾಖಲೆಗಳೊಂದಿಗೆ ಆಧಾರ್ ಸಂಖ್ಯೆ ಸಲ್ಲಿಸುವ ಮೂಲಕ ತಮ್ಮ ಹೆಸರನ್ನು ಮತ್ತೆ ಸೇರ್ಪಡೆ ಮಾಡುವುದಕ್ಕೆ ಅರ್ಜಿ ಸಲ್ಲಿಸಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದೆಯಷ್ಟೆ ಎಂದು ಬಿಜೆಪಿ ಹೇಳಿದೆ.
‘ಆಧಾರ್, ಕೇವಲ ಗುರುತು ಮತ್ತು ವಾಸಸ್ಥಳ ಕುರಿತ ದಾಖಲೆಯಾಗಿದೆ. ಇದು ಒಬ್ಬ ವ್ಯಕ್ತಿಯ ಪೌರತ್ವ ಸಾಬೀತುಪಡಿಸುವ ದಾಖಲೆಯಲ್ಲ’ ಎಂದು ಬಿಜೆಪಿಯ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿದ್ದಾರೆ.
‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವೇಳೆ, ಆಧಾರ್ ಅನ್ನು ಮಾನ್ಯ ಮಾಡಿದ ದಾಖಲೆಯಾಗಿ ಬಳಕೆ ಮಾಡಬಹುದು ಎಂಬುದಾಗಿ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಎಲ್ಲಿಯೂ ಹೇಳಿಲ್ಲ’ ಎಂದಿದ್ದಾರೆ.
ತನ್ನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಉಲ್ಲೇಖ ಮಾಡದೇ ಇರುವ ಅಂಶವನ್ನು ಅದು ಹೇಳಿದೆ ಎಂದು ಆರೋಪಿಸುವುದು ನ್ಯಾಯಾಂಗ ನಿಂದನೆಯಾಗಲಿದೆಅಮಿತ್ ಮಾಳವೀಯ, ಬಿಜೆಪಿ ಐ.ಟಿ ವಿಭಾಗ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.