ADVERTISEMENT

ರಾಷ್ಟ್ರೀಯ ಬಿಕ್ಕಟ್ಟಿನ ವೇಳೆ ಮೂಕಪ್ರೇಕ್ಷಕನಂತಿರಲಾಗದು: ‘ಸುಪ್ರೀಂ’

ಹೈಕೋರ್ಟ್‌ ಕಾರ್ಯ ವ್ಯಾಪ್ತಿಯ ಅತಿಕ್ರಮಣ ಉದ್ದೇಶ ಇಲ್ಲ: ಟೀಕಾಕಾರರಿಗೆ ಚಾಟಿ

ಪಿಟಿಐ
Published 27 ಏಪ್ರಿಲ್ 2021, 10:55 IST
Last Updated 27 ಏಪ್ರಿಲ್ 2021, 10:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೋವಿಡ್ ಪ್ರಕರಣಗಳು ಏರಿಯಾಗುತ್ತಿರುವುದನ್ನು 'ರಾಷ್ಟ್ರೀಯ ಬಿಕ್ಕಟ್ಟು'ಎಂದು ಕರೆದಿರುವ ಸುಪ್ರೀಂ ಕೋರ್ಟ್‌, ‘ಇಂಥ ಸಮಯದಲ್ಲಿ ನ್ಯಾಯಾಲಯ ಮೂಕ ಪ್ರೇಕ್ಷಕನಂತಿರಲು ಸಾಧ್ಯ ಇಲ್ಲ’ ಎಂದು ಹೇಳಿದೆ.

ಇದೇ ವೇಳೆ ಕೋವಿಡ್‌ ನಿರ್ವಹಣೆಯ ರಾಷ್ಟ್ರೀಯ ನೀತಿಯನ್ನು ರೂಪಿಸಲು ತೆಗೆದುಕೊಂಡಿರುವ ಸ್ವಯಂ ಪ್ರೇರಿತ ಕ್ರಮ ಹೈಕೋರ್ಟ್‌ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುವುದಕ್ಕಾಗಿ ಅಲ್ಲ‘ ಎಂದು ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು, ‘ತಮ್ಮ ಕಾರ್ಯವ್ಯಾಪ್ತಿಯಲ್ಲಿನ ಕೋವಿಡ್‌ ಪಿಡುಗಿನ ಪರಿಸ್ಥಿತಿ ಮೇಲೆ ನಿಗಾ ಇಡಲು ಹೈಕೋರ್ಟ್‌ಗಳು ಶಕ್ತವಾಗಿವೆ’ ಎಂದು ಹೇಳಿತು.

ADVERTISEMENT

ನ್ಯಾಯಮೂರ್ತಿಗಳಾದ ಎಲ್‌.ನಾಗೇಶ್ವರರಾವ್‌, ಎಸ್‌.ರವೀಂದ್ರ ಭಟ್‌ ಈ ನ್ಯಾಯಪೀಠದಲ್ಲಿದ್ದಾರೆ.

‘ಕಾರ್ಯ ವ್ಯಾಪ್ತಿ ಮಿತಿಯಿಂದಾಗಿ ಕೆಲವು ಸಂದರ್ಭಗಳಲ್ಲಿ ನ್ಯಾಯಾಲಯಗಳು ತೊಂದರೆ ಎದುರಿಸಬೇಕಾಗುತ್ತದೆ. ಅಂಥ ಸನ್ನಿವೇಶಗಳಲ್ಲಿ ಸುಪ್ರೀಂಕೋರ್ಟ್‌ ಪೂರಕವಾದ ಪಾತ್ರ ನಿರ್ವಹಿಸಬೇಕಾಗುತ್ತದೆ. ಸುಪ್ರೀಂಕೋರ್ಟ್‌ನ ಇಂಥ ನಡೆಯನ್ನು ಸರಿಯಾದ ದೃಷ್ಟಿಕೋನದಿಂದ ಅರ್ಥ ಮಾಡಿಕೊಳ್ಳಬೇಕು ’ ಎಂದು ಹೇಳಿತು.

ಕೆಲವು ರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿ ರಾಜ್ಯಗಳ ನಡುವೆ ಸಮನ್ವಯ ಸಾಧಿಸಲು ಸುಪ್ರೀಂಕೋರ್ಟ್‌ ಮಧ್ಯಪ್ರವೇಶಿಸಬೇಕಾಗುತ್ತದೆ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿತು.

ದೇಶದಲ್ಲಿ ಕೋವಿಡ್‌–19 ಪ್ರಕರಣಗಳು ತೀವ್ರವಾಗಿ ಹೆಚ್ಚಾದ ಕಾರಣ ಕಳೆದ ಗುರುವಾರ ಸುಪ್ರೀಂಕೋರ್ಟ್‌ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿತು. ಹೈಕೋರ್ಟ್‌ಗಳು ಸಹ ಈ ವಿಷಯವಾಗಿ ವಿಚಾರಣೆ ಮುಂದುವರಿಸಲು ಅನುಮತಿ ನೀಡಿತ್ತು. ಸುಪ್ರೀಂಕೋರ್ಟ್‌ನ ಈ ನಡೆಯನ್ನು ಕೆಲವು ಹಿರಿಯ ವಕೀಲರು ಟೀಕಿಸಿದ್ದರು. ಈ ಕಾರಣಕ್ಕೆ ನ್ಯಾಯಪೀಠ ಮತ್ತೊಮ್ಮೆ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.

ದೇಶದಲ್ಲಿ ಲಭ್ಯವಿರುವ ಕೋವಿಡ್‌ ಲಸಿಕೆಗಳಿಗೆ ಬೇರೆ ದರ ನಿಗದಿಪಡಿಸಿರುವುದನ್ನು ಪ್ರಶ್ನಿಸಿ ಹಿರಿಯ ವಕೀಲ ವಿಕಾಸ್‌ ಸಿಂಗ್‌ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಲಸಿಕೆಯ ದರ ನಿಗದಿ ಪಡಿಸುವಾಗ ಅನುಸರಿಸಿರುವ ಮಾನದಂಡ ಕುರಿತು ವಿವರಣೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.‌

18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡುವ ಕುರಿತು ಸರ್ಕಾರ ಘೋಷಿಸಿದೆ. ಆದರೆ, ಲಸಿಕೆಗೆ ವಿಪರೀತ ಬೇಡಿಕೆ ಹೆಚ್ಚುತ್ತಿದ್ದು, ಮೂಲಸೌಕರ್ಯಗಳ ಅಗತ್ಯವೂ ಇದೆ. ಇಂಥ ಸಂದರ್ಭದಲ್ಲಿ ಜನರಿಗೆ ಲಸಿಕೆ ನೀಡಲು ಮಾಡಿಕೊಂಡಿರುವ ಸಿದ್ಧತೆ ಕುರಿತು ಏ. 29 (ಗುರುವಾರ )ರ ಒಳಗಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ನ್ಯಾಯಪೀಠ ಎಲ್ಲ ರಾಜ್ಯಗಳಿಗೆ ಸೂಚಿಸಿತು.

ಆಮ್ಲಜನಕ ಹಾಗೂ ಲಸಿಕೆಯನ್ನು ರಾಜ್ಯಗಳಿಗೆ ವಿತರಣೆ ಮಾಡುವುದು ಹಾಗೂ ಇಡೀ ಪ್ರಕ್ರಿಯೆ ಮೇಲ್ವಿಚಾರಣೆಗೆ ಸಂಬಂಧಿಸಿದ ಮಾಹಿತಿಯನ್ನು ಸಲ್ಲಿಸುವಂತೆ ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು.

ಈ ವಿಷಯದಲ್ಲಿ ನ್ಯಾಯಾಲಯಕ್ಕೆ ನೆರವಾಗಲು (ಅಮಿಕಸ್‌ ಕ್ಯೂರಿ) ವಕೀಲರಾದ ಜೈದೀಪ್‌ ಗುಪ್ತಾ ಹಾಗೂ ಮೀನಾಕ್ಷಿ ಅರೋರಾ ಅವರನ್ನು ಸುಪ್ರೀಂಕೋರ್ಟ್‌ ನೇಮಕ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.