ADVERTISEMENT

ರಾಜಕಾರಣಿಗಳು ಭ್ರಾತೃತ್ವ ಬೆಳೆಸಬೇಕು: ಸುಪ್ರೀಂ ಕೋರ್ಟ್

ಹೊಸತಾಗಿ ಅರ್ಜಿ ಸಲ್ಲಿಸಿ: ಸುಪ್ರೀಂ ಕೋರ್ಟ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 16:03 IST
Last Updated 17 ಫೆಬ್ರುವರಿ 2026, 16:03 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ‘ರಾಜಕೀಯ ನಾಯಕರು ದೇಶದ ಭ್ರಾತೃತ್ವ ಬೆಳೆಸಬೇಕು’ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

ರಾಜಕೀಯ ಭಾಷಣಗಳ ಕುರಿತು ಹೊಸ ಮಾರ್ಗಸೂಚಿ ಕುರಿತು ಶಿಕ್ಷಣ ತಜ್ಞೆ ರೂಪ್‌ ರೇಖಾ ವರ್ಮಾ ಸೇರಿದಂತೆ 12 ಮಂದಿಗೆ ಹೊಸತಾಗಿ ಅರ್ಜಿ ದಾಖಲಿಸಲು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಭ್ರಾತೃತ್ವ ಹಾಗೂ ಸಾಂವಿಧಾನಿಕ ಮೌಲ್ಯಗಳ ಪರಿಣಾಮ ಬೀರುವ ರಾಜಕಾರಣಿಗಳ ಭಾಷಣದ ಕುರಿತಂತೆ ಹೊಸ ಮಾರ್ಗಸೂಚಿ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಲು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌, ನ್ಯಾ.ಜಾಯ್‌ಮಾಲ್ಯ ಬಾಗ್ಚಿ, ನ್ಯಾ. ಬಿ.ವಿ.ನಾಗರತ್ನ ಅವರಿದ್ದ ಪೀಠವು ನಿರಾಕರಿಸಿತು.

ADVERTISEMENT

ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮಾ ಅವರ ಇತ್ತೀಚಿಗಿನ ದ್ವೇಷ ಭಾಷಣ ಉಲ್ಲೇಖಿಸಿ ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅರ್ಜಿದಾರರ ಪ‍ರ ವಾದ ಮಂಡಿಸಿದರು.

‘ವಾತಾವರಣವು ತುಂಬಾ ಕಲುಷಿತವಾಗಿದೆ. ಹೀಗಾಗಿ, ದೇಶದ ಭ್ರಾತೃತ್ವ ಕೆಡಿಸುವ ಭಾಷಣಗಳ ಕುರಿತಂತೆ ಮಾರ್ಗಸೂಚಿ ಸಿದ್ದಪಡಿಸುವ ಅಗತ್ಯವಿದೆ, ಯಾವುದೇ ನಿರ್ದಿಷ್ಟ ನಾಯಕರನ್ನು ಗುರಿಯಾಗಿರಿಸಿಕೊಂಡು ಈ ಹೇಳಿಕೆ ನೀಡುತ್ತಿಲ್ಲ’ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.

ಈ ಬೇಡಿಕೆಗೆ ನ್ಯಾಯಪೀಠ ಸಮ್ಮತಿಸಲಿಲ್ಲ.

‘ಅರ್ಜಿಯು ನಿರ್ದಿಷ್ಟ ರಾಜಕೀಯ ಪಕ್ಷವನ್ನು ಗುರಿಯಾಗಿರಿಸಿಕೊಂಡಂತಿದೆ. ಇಂತಹ ಅರ್ಜಿಯನ್ನು ಮಾನ್ಯ ಮಾಡುವುದಿಲ್ಲ. ವಸ್ತುನಿಷ್ಠತೆ ಹೊಂದಿರುವ ಯಾವುದಾದರೂ ಒಂದು ನಿರ್ದಿಷ್ಟ ಅರ್ಜಿಯನ್ನು ಸಲ್ಲಿಸಲು ಎದುರು ನೋಡುತ್ತಿದ್ದೇನೆ’ ಎಂದು ಸಿಜೆಐ ತಿಳಿಸಿದರು.

ಈ ಕುರಿತಾಗಿ ಹೊಸತಾಗಿ ಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ ನ್ಯಾಯಪೀಠ ಸೂಚಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.