ADVERTISEMENT

ಮಂಗಳೂರು ಗೋಲಿಬಾರ್‌ ಪ್ರಕರಣ: ಸಿಎಎ ಪ್ರತಿಭಟನಕಾರರಿಂದ ಜಾಮೀನಿಗೆ ಅರ್ಜಿ

ಕರ್ನಾಟಕದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 13:50 IST
Last Updated 25 ಜುಲೈ 2020, 13:50 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಕಳೆದ ಡಿಸೆಂಬರ್‌ನಲ್ಲಿ ಪೌರತ್ವ(ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧಿಸಿ ಮಂಗಳೂರಿನಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಬಂಧನಕ್ಕೆ ಒಳಗಾಗಿದ್ದ 21 ಸಿಎಎ ವಿರೋಧಿ ಪ್ರತಿಭಟನಕಾರರು, ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಈ ಕುರಿತು ಕರ್ನಾಟಕ ಸರ್ಕಾರದ ಪ್ರತಿಕ್ರಿಯೆಯನ್ನು ನ್ಯಾಯಪೀಠ ಕೇಳಿದೆ.

ಮೊಹಮ್ಮದ್‌ ಆಸಿಕ್‌ ಹಾಗೂ ಮತ್ತಿತರರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎಸ್‌.ಎ.ಬೊಬಡೆ, ನ್ಯಾಯಮೂರ್ತಿಗಳಾದ ಎ.ಎಸ್‌.ಭೋಪಣ್ಣ ಹಾಗೂ ವಿ. ರಾಮಸುಬ್ರಮಣಿಯನ್‌ ಅವರಿದ್ದ ನ್ಯಾಯಪೀಠವು, ರಾಜ್ಯ ಸರ್ಕಾರಕ್ಕೆ ನೋಟಿಸ್‌ ನೀಡಿದ್ದು, ಎರಡು ವಾರದೊಳಗಾಗಿ ಉತ್ತರಿಸಲು ಸೂಚಿಸಿದೆ.

‘ಅವರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಪೊಲೀಸರು ಗೋಲಿಬಾರ್‌ ನಡೆಸಿದರು. ಇದರಿಂದಾಗಿ ಇಬ್ಬರು ಮೃತಪಟ್ಟರು’ ಎಂದು ಅರ್ಜಿದಾರರ ಪರ ಹಿರಿಯ ವಕೀಲರಾದ ಆರ್‌.ಬಸಂತ್‌ ಹಾಗೂ ಹ್ಯಾರಿಸ್‌ ಬೀರನ್‌ ವಾದಿಸಿದರು. ‘ಕಳೆದ ಏಳು ತಿಂಗಳಿಂದ ಅವರು ಕಸ್ಟಡಿಯಲ್ಲಿದ್ದು, ಪೊಲೀಸರು ಆರೋಪಪಟ್ಟಿಯನ್ನೂ ದಾಖಲಿಸಿದ್ದಾರೆ. ಹೀಗಾಗಿ ತನಿಖೆಗೆ ಇವರ ಅಗತ್ಯತೆ ಇಲ್ಲ’ ಎಂದು ಪೀಠಕ್ಕೆ ಮಾಹಿತಿ ನೀಡಿದರು.

ADVERTISEMENT

ಅರ್ಜಿದಾರರಿಗೆ ಕರ್ನಾಟಕ ಹೈಕೋರ್ಟ್‌ ಫೆ.17ರಂದು ಜಾಮೀನು ನೀಡಿತ್ತು. ಆದರೆ ಈ ಆದೇಶಕ್ಕೆ ಮಾರ್ಚ್‌ 6ರಂದು ಸುಪ್ರೀಂ ಕೋರ್ಟ್‌ ತಡೆ ನೀಡಿತ್ತು.

‘ಮಾರ್ಚ್‌ 6ರ ನಂತರದಲ್ಲಿ ದೇಶದಾದ್ಯಂತ ಕೋವಿಡ್‌ ಪಿಡುಗು ಏರಿಕೆಯಾಗುತ್ತಿದೆ. ಅನಗತ್ಯವಾಗಿ ವಿಚಾರಣಾಧೀನ ಕೈದಿಗಳನ್ನು ಜೈಲಿನಲ್ಲಿ ಇರಿಸುವುದರಿಂದ, ಕೋವಿಡ್‌ ಹರಡುವ ಸಾಧ್ಯತೆ ಇದೆ. ಈಗಾಗಲೇ ಪೊಲೀಸರ ಕ್ರೌರ್ಯವನ್ನು ನಾವು ಅನುಭವಿಸಿದ್ದೇವೆ. ಇಂಥ ಸಂದರ್ಭದಲ್ಲಿ ಜಾಮೀನು ನಿರಾಕರಿಸಿದರೆ, ಮನಸ್ಸಿಗೆ ವಾಸಿಯಾಗದಂತ ಗಾಯವಾಗಬಹುದು, ಸಾವೂ ಸಂಭವಿಸಬಹುದು’ ಎಂದು ಅರ್ಜಿದಾರರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.