ನವದೆಹಲಿ: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾರೆ ಎಂಬ ಪ್ರಕರಣದಲ್ಲಿ ನಟಿಯ ಕ್ಷಮೆ ಕೋರುವಂತೆ ತಮಿಳು ಚಲನಚಿತ್ರ ನಿರ್ದೇಶಕ ಹಾಗೂ ರಾಜಕಾರಣಿ ಸೀಮನ್ ಅವರಿಗೆ ಸುಪ್ರೀಂ ಕೋರ್ಟ್ ಗುರುವಾರ ಸೂಚಿಸಿದೆ.
ತನ್ನ ವಿರುದ್ಧದ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸೀಮನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನಾ ಹಾಗೂ ಆರ್. ಮಹದೇವನ್ ಅವರಿದ್ದ ಪೀಠವು ನಡೆಸಿತು.
‘ನಟಿಯ ವಿರುದ್ಧ ನಾನು ಮಾಡಿದ್ದ ನಾನು ಆರೋಪಗಳನ್ನು ಹಿಂಪಡೆಯುವೆ. ಭವಿಷ್ಯದಲ್ಲಿ ಆಕೆಗೆ ತೊಂದರೆ ನೀಡಲ್ಲ. ಕ್ಷಮೆ ಯಾಚಿಸುವೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದೀರಿ. ಈ ಎಲ್ಲವನ್ನೂ ಪಾಲಿಸುವುದಾದರೆ, ನಾವು ದೂರನ್ನು ರದ್ದುಗೊಳಿಸಬಹುದು’ ಎಂದು ಪೀಠ ಹೇಳಿದೆ.
ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸುವಂತೆ ಹೈಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿತ್ತು.
‘ನನ್ನನ್ನು ಭಾವನಾತ್ಮಕವಾಗಿ ನಂಬಿಸಿದ್ದ ಸೀಮನ್, ಮದುವೆಯಾಗುವ ಭರವಸೆ ನೀಡಿದ್ದರಿಂದ 2007ರಿಂದ 2011ರವರೆಗೆ ಆತನ ಜೊತೆ ಸಹ ವಾಸದಲ್ಲಿದ್ದೆ. ಈ ಅವಧಿಯಲ್ಲಿ ಆತನು ನನ್ನ ಮೇಲೆ ಲೈಂಗಿಕ ಶೋಷಣೆ ನಡೆಸಿದ್ದಾನೆ. ನನ್ನನ್ನು ಮದುವೆಯಾಗದೆ ಬೇರೊಬ್ಬರನ್ನು ಮದುವೆಯಾದ’ ಎಂದು ನಟಿ ದೂರು ನೀಡಿದ್ದರು.
ಇಬ್ಬರೂ ಸಾರ್ವಜನಿಕವಾಗಿ ಪರಸ್ಪರ ನಿಂದಿಸಿಕೊಳ್ಳುತ್ತಿರುವುದಕ್ಕೂ ಪೀಠವು ಆಕ್ಷೇಪ ವ್ಯಕ್ತಪಡಿಸಿದೆ.
ನಟಿಯ ಕ್ಷಮೆ ಕೋರದಿದ್ದರೆ ಮಧ್ಯಂತರ ರಕ್ಷಣೆಯನ್ನು ತೆಗೆದು ಹಾಕುವುದಾಗಿ ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ಎಚ್ಚರಿಕೆ ನೀಡಿದರು. ವಿಚಾರಣೆಯನ್ನು ಸೆ. 24ಕ್ಕೆ ಮುಂದೂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.