
ನವದೆಹಲಿ: ವಾದ ಮಂಡನೆ ಮತ್ತು ಲಿಖಿತ ಟಿಪ್ಪಣಿ ಸಲ್ಲಿಕೆಗೆ ವಕೀಲರು ವೇಳಾಪಟ್ಟಿ ನಿಗದಿಪಡಿಸಿ, ಈ ವೇಳಾಪಟ್ಟಿಗೆ ಅವರು ಬದ್ಧರಾಗಿರುವುದಕ್ಕಾಗಿ ಸುಪ್ರೀಂ ಕೋರ್ಟ್ ಹೊಸ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (ಎಸ್‌ಒಪಿ) ನಿಗದಿಪಡಿಸಿದೆ.
ನ್ಯಾಯಾಲಯಗಳ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ ತರುವುದು ಮತ್ತು ನ್ಯಾಯದಾನ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಗುರಿಯನ್ನು ಈ ಕ್ರಮ ಹೊಂದಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ನಿರ್ದೇಶನದ ಮೇರೆಗೆ ಡಿಸೆಂಬರ್ 29ರಂದು ಈ ಸುತ್ತೋಲೆ ಹೊರಡಿಸಲಾಗಿದೆ.
‘ವಿವಿಧ ಪ್ರಕರಣಗಳಲ್ಲಿ ವಾದಿಸುವ ಹಿರಿಯ ವಕೀಲರು, ವಕೀಲರು ಅಥವಾ ಎಒಆರ್‌ಗಳು (ಅಡ್ವೊಕೇಟ್ ಆನ್ ರೆಕಾರ್ಡ್) ವಾದ ಮಂಡನೆಯ ವೇಳಾಪಟ್ಟಿಯನ್ನು ಪ್ರಕರಣದ ವಿಚಾರಣೆ ಪ್ರಾರಂಭವಾಗುವ ಕನಿಷ್ಠ ಒಂದು ದಿನ ಮೊದಲು ಸಲ್ಲಿಸಬೇಕು. ನಿರ್ದಿಷ್ಟ ಪ್ರಕರಣದಲ್ಲಿ ವಾದ ಮಂಡಿಸುವುದಕ್ಕಾಗಿ ಎಒಆರ್‌ಗೆ ಈಗಾಗಲೇ ಒದಗಿಸಲಾದ ‘ಹಾಜರಾತಿ ಚೀಟಿ’ಯನ್ನು ವೆಬ್‌ಸೈಟ್ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂದು ಎಸ್‌ಒಪಿ ಹೇಳಿದೆ.
‘ವೇಳಾಪಟ್ಟಿಯನ್ನು ಮುಂಚಿತವಾಗಿ ನಿಗದಿಪಡಿಸುವುದರ ಜತೆಗೆ ವಾದ ಮಂಡಿಸುವ ವಕೀಲರು ತಮ್ಮ ವಾದದ ಸಂಕ್ಷಿಪ್ತ ವಿವರಗಳನ್ನು ಲಿಖಿತವಾಗಿ (ಐದು ಪುಟಗಳಿಗೆ ಮೀರದಂತೆ) ವಿಚಾರಣೆ ಆರಂಭಕ್ಕೆ ಕನಿಷ್ಠ ಮೂರು ದಿನ ಮುಂಚಿತವಾಗಿ ಕಡ್ಡಾಯವಾಗಿ ಸಲ್ಲಿಸಬೇಕು’ ಎಂದಿದೆ. ಹೊಸ ಎಸ್‌ಒಪಿ ತಕ್ಷಣದಿಂದಲೇ ಜಾರಿಗೆ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.