ADVERTISEMENT

ಕೇಂದ್ರ ನೌಕರರ ವಿರುದ್ಧದ ಲಂಚ ಆರೋಪ| ರಾಜ್ಯ ಪೊಲೀಸರೂ ತನಿಖೆ ನಡೆಸಬಹುದು: ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 16:16 IST
Last Updated 20 ಜನವರಿ 2026, 16:16 IST
–
   

ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ವಿರುದ್ಧದ ಲಂಚದ ಆರೋಪಗಳ ಕುರಿತು ರಾಜ್ಯಗಳ ಪೊಲೀಸರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸಬಹುದು. ಇದಕ್ಕೆ ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ) ಅನುಮೋದನೆ ಅಥವಾ ಅನುಮತಿಯ ಅಗತ್ಯ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

‘ಲಂಚ, ಭ್ರಷ್ಟಾಚಾರ ಹಾಗೂ ದುರ್ವರ್ತನೆ ಆರೋಪಗಳನ್ನು ಎದುರಿಸುತ್ತಿರುವ ಕೇಂದ್ರ ಸರ್ಕಾರದ ನೌಕರರ ವಿರುದ್ಧ ರಾಜ್ಯ ಪೊಲೀಸರು ಪ್ರಕರಣ ದಾಖಲಿಸುವುದು ಅಥವಾ ತನಿಖೆ ಕೈಗೊಳ್ಳುವುದನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ (ಪಿ.ಸಿ ಕಾಯ್ದೆ) ಸೆಕ್ಷನ್ 17 ನಿರ್ಬಂಧಿಸುವುದಿಲ್ಲ’ ಎಂದೂ ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಸತೀಶ್ಚಂದ್ರ ಶರ್ಮಾ ಅವರು ಇದ್ದ ನ್ಯಾಯಪೀಠ ಈ ಕುರಿತ ಮೇಲ್ಮನವಿಯ ವಿಚಾರಣೆ ವೇಳೆ ಈ ಮಾತು ಹೇಳಿದೆ.

ADVERTISEMENT

ನವಲ್‌ಕಿಶೋರ್‌ ಮೀನಾ ವಿರುದ್ಧ ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯು (ಎಸಿಬಿ) ಪಿ.ಸಿ ಕಾಯ್ದೆಯಡಿ ಕ್ರಿಮಿನಲ್‌ ಪ್ರಕರಣ ದಾಖಲಿಸಬಹುದು. ನವಲ್‌ಕಿಶೋರ್‌ ಕೇಂದ್ರ ಸರ್ಕಾರಿ ನೌಕರರಾಗಿದ್ದರೂ ಅವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸಲು ಈ ಕಾಯ್ದೆಯಡಿ ಅವಕಾಶ ಇದೆ ಎಂದು ರಾಜಸ್ಥಾನ ಹೈಕೋರ್ಟ್‌ ಕಳೆದ ವರ್ಷ ಅಕ್ಟೋಬರ್ 3ರಂದು ಆದೇಶಿಸಿತ್ತು.

ಹೈಕೋರ್ಟ್‌ ಆದೇಶ ಪ್ರಶ್ನಿಸಿ ನವಲ್‌ಕಿಶೋರ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಪೀಠ ವಜಾಗೊಳಿಸಿ, ಜನವರಿ 19ರಂದು ತೀರ್ಪು ನೀಡಿದೆ. 

‘ನವಲ್‌ ಕಿಶೋರ್‌ ಮೀನಾ ಪ್ರಕರಣದಲ್ಲಿ ರಾಜಸ್ಥಾನ ಹೈಕೋರ್ಟ್ ಸರಿಯಾದ ನಿಲುವು ತಳೆದಿದೆ’ ಎಂದೂ ಪೀಠ ಹೇಳಿದೆ.

‘ಭಿನ್ನವಾದ ಕ್ರಿಮಿನಲ್‌ ಪ್ರಕರಣಗಳಿಗೆ ಸಂಬಂಧಿಸಿ ತನಿಖೆ ನಡೆಸುವುದು ಸೇರಿ ಕಾನೂನು–ಸುವ್ಯವಸ್ಥೆಯು ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಸಾಮಾನ್ಯವಾಗಿ ಇಂತಹ ಪ್ರಕರಣಗಳ ತನಿಖೆಯನ್ನು ರಾಜ್ಯಗಳೇ ನಡೆಸುತ್ತವೆ’ ಎಂದು ನ್ಯಾಯಪೀಠ ಹೇಳಿದೆ.

‘ಆದರೆ, ತನಿಖೆ ವಿಚಾರದಲ್ಲಿ ಸಿಬಿಐ ಹಾಗೂ ರಾಜ್ಯ ಪೊಲೀಸ್‌ ನಡುವಿನ ಸಂಬಂಧ ಪರಸ್ಪರ ಪೂರಕ. ಸಿಬಿಐನ ನಿಯಮಗಳು ಹಾಗೂ ಸಿಬಿಐ ಮತ್ತು ರಾಜ್ಯ ಪೊಲೀಸ್‌ ನಡುವಿನ ಹೊಂದಾಣಿಕೆ ವಿಚಾರಕ್ಕೆ ಬಂದಾಗ, ಈ ಎರಡೂ ಸಂಸ್ಥೆಗಳು ಹಲವು ವಿಷಯಗಳಿಗೆ ಸಂಬಂಧಿಸಿ ಒಂದಕ್ಕೊಂದು ಸಹಕಾರ ಹಾಗೂ ಬೆಂಬಲ ನೀಡಬೇಕಾಗುತ್ತದೆ’ ಎಂದು ಪೀಠ ಅಭಿಪ್ರಾಯಪಟ್ಟಿದೆ.

ನ್ಯಾಯಪೀಠ ಹೇಳಿದ್ದು

* ಕೇಂದ್ರ ಸರ್ಕಾರ ಹಾಗೂ ಇದರ ಅಧೀನ ಸಂಸ್ಥೆಗಳ ನೌಕರರ ವಿರುದ್ಧ ಕೇಳಿ ಬರುವ ಲಂಚ/ಭ್ರಷ್ಟಾಚಾರ ಆರೋಪಗಳ ಕುರಿತು ಸಿಬಿಐ ತನಿಖೆ ನಡೆಸುತ್ತದೆ. ಸಿಬಿಐಗೆ, ದೆಹಲಿಯ ವಿಶೇಷ ಪೊಲೀಸ್‌ ಎಸ್ಟಾಬ್ಲಿಷ್‌ಮೆಂಟ್‌ ಕಾಯ್ದೆಯಡಿ ಈ ಅಧಿಕಾರ ನೀಡಲಾಗಿದೆ.

* ಸರ್ಕಾರಿ ನೌಕರರ ವಿರುದ್ಧದ ಲಂಚ/ಭ್ರಷ್ಟಾಚಾರ ಆರೋಪಗಳ ಕುರಿತು ರಾಜ್ಯ ಸರ್ಕಾರ ಅಧೀನದ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ತನಿಖೆ ನಡೆಸುತ್ತದೆ

* ಲಂಚ/ಭ್ರಷ್ಟಾಚಾರ ಆರೋಪಗಳ ಕುರಿತು ತನಿಖೆ, ವಿಚಾರಣೆ ನಡೆಸುವುದಕ್ಕೆ ಅಪರಾಧಿಕ ಪ್ರಕ್ರಿಯಾ ಸಂಹಿತೆ (ಈಗ ಬಿಎನ್‌ಎಸ್‌ಎಸ್‌) ಅವಕಾಶ ಕಲ್ಪಿಸುತ್ತದೆ. ಆದರೆ, ತನಿಖೆಗೆ ಸಂಬಂಧಿಸಿ ವಿಶೇಷ ಕಾಯ್ದೆಯು ಇದೆ ಎಂದ ಮಾತ್ರಕ್ಕೆ, ಸಿಆರ್‌ಪಿಸಿ (ಅಪರಾಧಿಕ ಪ್ರಕ್ರಿಯಾ ಸಂಹಿತೆ) ಕಾಯ್ದೆಯನ್ನು
ಅನುಸರಿಸಬಾರದು ಎಂದರ್ಥವಲ್ಲ. ತನಿಖೆ ವಿಚಾರದಲ್ಲಿ ಸಿಆರ್‌ಪಿಸಿಯ
ಸೆಕ್ಷನ್‌ 156 ಮುಖ್ಯವಾಗುತ್ತದೆ

* ಗಂಭೀರ ಪ್ರಕರಣಗಳ ಕುರಿತು ತನಿಖೆ ನಡೆಸುವುದಕ್ಕೆ ಯಾವುದೇ ಠಾಣೆಯ ಪೊಲೀಸ್‌ ಅಧಿಕಾರಿಗೆ ಸಿಆರ್‌ಪಿಸಿ ಸೆಕ್ಷನ್‌ 156 ಅಧಿಕಾರ ನೀಡುತ್ತದೆ. ಇದಕ್ಕೆ ಮ್ಯಾಜಿಸ್ಟ್ರೇಟ್‌ ಅವರ ಆದೇಶ ಬೇಕಾಗಿಲ್ಲ

* ಜಾಗೃತ ಮತ್ತು ಭ್ರಷ್ಟಾಚಾರ ನಿಗ್ರಹ ದಳ (ವಿಎಸಿಬಿ) ಕೂಡ ರಾಜ್ಯ ಪೊಲೀಸ್‌ ಇಲಾಖೆಯ ಭಾಗವೇ ಆಗಿದೆ. ಹೀಗಾಗಿ, ಭ್ರಷ್ಟಾಚಾರ ಕಾಯ್ದೆಯ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣಗಳ ಕುರಿತು ಪೊಲೀಸ್‌ ಇಲಾಖೆ ಇಲ್ಲವೇ ವಿಎಸಿಬಿ ತನಿಖೆ ನಡೆಸಬಹುದು

* ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್‌ 17ರಲ್ಲಿ ಉಲ್ಲೇಖಿಸಿರುವಂತೆ ನಿರ್ದಿಷ್ಟ ಶ್ರೇಣಿಯ ಪೊಲೀಸ್‌ ಅಧಿಕಾರಿ ಮಾತ್ರ ತನಿಖೆ ನಡೆಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.