ADVERTISEMENT

ವಾರಾಣಸಿ ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ

ಪಿಟಿಐ
Published 24 ಜುಲೈ 2023, 7:07 IST
Last Updated 24 ಜುಲೈ 2023, 7:07 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ವಾರಾಣಸಿ/ನವದೆಹಲಿ: ಇಲ್ಲಿನ ಜ್ಞಾನವಾಪಿ ಮಸೀದಿ ಸಂಕೀರ್ಣದ ‘ವಿಸ್ತೃತ ವೈಜ್ಞಾನಿಕ ಸಮೀಕ್ಷೆ’ಗೆ ಜು.26ರ ಸಂಜೆ 5 ಗಂಟೆವರೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಮಸೀದಿ ಸ್ಥಳದಲ್ಲಿ ಯಾವುದೇ ಸಮೀಕ್ಷೆ ನಡೆಸಬಾರದು ಎಂದು ಸೂಚಿಸಿದೆ. 


‘ವಾರಾಣಸಿ ಜಿಲ್ಲಾ ಕೋರ್ಟ್ ಜುಲೈ 21ರಂದು ಸಮೀಕ್ಷೆಗೆ ಆದೇಶಿಸಿದೆ. ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಅಗತ್ಯ ಇರುವುದರಿಂದ ಕೆಳ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದೆ ಎಂದು ತಿಳಿಸಿದ ಸುಪ್ರೀಂ ಕೋರ್ಟ್‌, ಇದನ್ನು ತಕ್ಷಣ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್ಐ) ಗಮನಕ್ಕೆ ತರಬೇಕು‘ ಎಂದು ಉತ್ತರ ಪ್ರದೇಶ ಸರ್ಕಾರ ಪ್ರತಿನಿಧಿಸಿದ್ದ ಸಾಲಿಸಿಟರ್‌ ಜನರಲ್‌ ಅವರಿಗೆ ಕೋರ್ಟ್ ಸೂಚಿಸಿತು. ಅಲ್ಲದೆ ಪ್ರತಿವಾದಿಯಾದ ಮಸೀದಿ ಸಮಿತಿಯ ಅಹವಾಲು ಆಲಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್‌ಗೆ ನಿರ್ದೇಶನ ನೀಡಿತು. 


ಜಿಲ್ಲಾ ಕೋರ್ಟ್‌ ಆದೇಶದಂತೆ ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆ ಕೈಗೊಳ್ಳುವ ಹಿನ್ನೆಲೆಯಲ್ಲಿ, ತುರ್ತು ವಿಚಾರಣೆ ಕೋರಿ ಜ್ಞಾನವಾಪಿ ಮಸೀದಿಯ ಅಂಜುಮನ್‌ ಇಂತೆಜಾಮೀಯಾ ಸಮಿತಿಯು ಸುಪ್ರೀಂ ಮೆಟ್ಟಿಲೇರಿತ್ತು. 

ADVERTISEMENT


ಜಿಲ್ಲಾ ಕೋರ್ಟ್‌ ಆದೇಶವನ್ನು ಪ್ರಶ್ನಿಸಿ, ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು ಎಂದು ಸಂವಿಧಾನದ ವಿಧಿ 227ರಲ್ಲಿ ದತ್ತವಾಗಿರುವ ಅಧಿಕಾರ ವ್ಯಾಪ್ತಿಯಲ್ಲಿ ಸೂಚನೆ ನೀಡಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ ತಿಳಿಸಿತು. 


ಸ್ಥಗಿತ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಸುಮಾರು 30 ಸದಸ್ಯರ ತಂಡವು ಸೋಮವಾರ ಬೆಳಿಗ್ಗೆ 7 ಗಂಟೆಗೆ ಮಸೀದಿ ಆವರಣಕ್ಕೆ ಆಗಮಿಸಿತ್ತು. ತಡೆಯಾಜ್ಞೆ ಹಿನ್ನೆಲೆಯಲ್ಲಿ ಸಮೀಕ್ಷೆಯನ್ನು ಸ್ಥಗಿತಗೊಳಿಸಿತು. 


‘ಸದ್ಯ ಸಮೀಕ್ಷೆ ಕಾರ್ಯ ನಿಲ್ಲಿಸಲಾಗಿದೆ’ ಎಂದು ವಿಭಾಗೀಯ ಆಯುಕ್ತ ಕೌಶಲ್‌ ರಾಜ್‌ ಶರ್ಮಾ ತಿಳಿಸಿದರು. ಹಿಂದೂ ಅರ್ಜಿದಾರರ ಪರ ವಕೀಲ ಸುಭಾಷ್‌ ನಂದನ್‌ ಚತುರ್ವೇದಿ, ‘ಸೋಮವಾರ ಸುಮಾರು 4 ಗಂಟೆ ಸಮೀಕ್ಷೆ ನಡೆಯಿತು’ ಎಂದು ತಿಳಿಸಿದರು.


ಸಮೀಕ್ಷೆ ಭಾಗವಾಗಿ ಇಡೀ ಸಂಕೀರ್ಣವನ್ನು ಪರಿಶೀಲಿಸಿ ಅಳತೆ ಮಾಡಲಾಗುತ್ತದೆ. ಇದಕ್ಕಾಗಿ ನಾಲ್ಕು ದಿಕ್ಕುಗಳಲ್ಲಿ ತಲಾ ಒಂದು ತಂಡ ನಿಯೋಜಿಸಿದೆ. ಕ್ಯಾಮೆರಾಗಳನ್ನೂ ಅಳವಡಿಸಿದ್ದು, ಇಡೀ ಪ್ರಕ್ರಿಯೆಯ ವಿಡಿಯೊ ಚಿತ್ರೀಕರಣ ಮಾಡಲಾಗುತ್ತದೆ.  


ಮತ್ತೊಬ್ಬ ವಕೀಲ ವಿಷ್ಣು ಶಂಕರ್ ಜೈನ್‌, ‘ಮಸೀದಿಯಲ್ಲಿ ದಾಂದಲೆ ನಡೆಸಲಾಗುತ್ತಿದೆ ಎಂದು ಮುಸ್ಲಿಂ ಕಡೆಯವರು ತಪ್ಪು ಹೇಳಿಕೆ ನೀಡಿದ್ದಾರೆ. ಆದರೆ, ಅಲ್ಲಿ ಸದ್ಯ ಅಳತೆ ಮಾಡುವ ಮತ್ತು ಗುರುತಿಸುವ ಕೆಲಸವಷ್ಟೇ ನಡೆಯುತ್ತಿದೆ’ ಎಂದು ಹೇಳಿದರು.


ಕೆಳಹಂತದ ಕೋರ್ಟ್ ಆದೇಶದಂತೆ ಸಮೀಕ್ಷೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಎಎಸ್‌ಐ ತಂಡವಲ್ಲದೇ ಎಲ್ಲ ಹಿಂದೂ ಅರ್ಜಿದಾರರು ಉಪಸ್ಥಿತರಿದ್ದರು ಎಂದು ವಕೀಲ ಮದನ್‌ ಮೋಹನ್‌ ಯಾದವ್‌ ತಿಳಿಸಿದರು.


ವಾರಾಣಸಿ ಕೋರ್ಟ್‌ ಶುಕ್ರವಾರ ಎಎಸ್‌ಐಗೆ ಆದೇಶ ನೀಡಿದ್ದು, ಮಸೀದಿ ಪ್ರದೇಶದ ವಿಸ್ತೃತ ವೈಜ್ಞಾನಿಕ ಸಮೀಕ್ಷೆ ನಡೆಸಬೇಕು. ದೇಗುಲವಿದ್ದ ಸ್ಥಳದಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂಬುದರ ಪತ್ತೆಗೆ ಅಗತ್ಯವೆನಿಸಿದರೆ ಉತ್ಖನನ ನಡೆಸಬೇಕು ಎಂದು ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.