ADVERTISEMENT

ಎಐಎಡಿಎಂಕೆ ಸಂಸದ ರವೀಂದ್ರನಾಥ ಆಯ್ಕೆ ಅಸಿಂಧು ಆದೇಶಕ್ಕೆ ಸುಪ್ರಿಂಕೋರ್ಟ್ ತಡೆ

ಜುಲೈ 6ರಂದು ಆದೇಶ ಹೊರಡಿಸಿದ್ದ ಮದ್ರಾಸ್‌ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2023, 13:21 IST
Last Updated 5 ಆಗಸ್ಟ್ 2023, 13:21 IST
   

ನವದೆಹಲಿ: ಎಐಎಡಿಎಂಕೆ ಉಚ್ಚಾಟಿತ ಮುಖಂಡ ಹಾಗೂ ಸಂಸದ ಪಿ.ರವೀಂದ್ರನಾಥ ಅವರ ಆಯ್ಕೆಯನ್ನು ಅಸಿಂಧು ಎಂದು ಘೋಷಿಸಿ ಮದ್ರಾಸ್‌ ಹೈಕೋರ್ಟ್‌ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್‌ ತಡೆ ನೀಡಿದೆ.

ಹೈಕೋರ್ಟ್‌ ಆದೇಶ ಪ್ರಶ್ನಿಸಿ ರವೀಂದ್ರನಾಥ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ ಹಾಗೂ ದೀಪಂಕರ್ ದತ್ತ ಅವರಿದ್ದ ನ್ಯಾಯಪೀಠ ನಡೆಸಿತು.

ಇವರ ಆಯ್ಕೆಯನ್ನು ಪ್ರಶ್ನಿಸಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದ ಪಿ.ಮಿಲಾನಿ ಅವರಿಗೆ ನ್ಯಾಯಪೀಠ ನೋಟಿಸ್‌ ಜಾರಿ ಮಾಡಿತು.

ADVERTISEMENT

ತಮಿಳುನಾಡಿನ ಥೇಣಿ ಲೋಕಸಭಾ ಕ್ಷೇತ್ರದಿಂದ 2019ರಲ್ಲಿ ಆಯ್ಕೆಯಾಗಿರುವ ರವೀಂದ್ರನಾಥ ಅವರು ಎಐಎಡಿಎಂಕೆಯ ಏಕೈಕ ಸಂಸದರಾಗಿದ್ದಾರೆ. ಅವರು ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಉಚ್ಚಾಟಿತ ನಾಯಕ ಒ.ಪನ್ನೀರ್‌ಸೆಲ್ವಂ ಅವರ ಪುತ್ರ.

ಕಾಂಗ್ರೆಸ್‌ನ ಹಿರಿಯ ನಾಯಕ ಇ.ವಿ.ಕೆ.ಎಸ್‌.ಇಳಂಗೋವನ್‌ ಅವರನ್ನು ಪರಾಭವಗೊಳಿಸಿದ್ದರು.

‘ಈ ಪ್ರಕರಣದಲ್ಲಿ ಮದ್ರಾಸ್‌ ಹೈಕೋರ್ಟ್‌ ಜುಲೈ 6ರಂದು ನೀಡಿರುವ ಆದೇಶಕ್ಕೆ ತಡೆ ನೀಡಲಾಗಿದ್ದು, ಮುಂದಿನ ಆದೇಶದ ವರೆಗೆ ರವೀಂದ್ರನಾಥ ಅವರು ಸಂಸದರಾಗಿ ಮುಂದುವರಿಯಲಿದ್ದಾರೆ’ ಎಂದು ನ್ಯಾಯಪೀಠವು ಶುಕ್ರವಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.

ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ರವೀಂದ್ರನಾಥ ಅವರು ಅನೇಕ ಮಾಹಿತಿಗಳನ್ನು ಮುಚ್ಚಿಟ್ಟಿದ್ದರು. ಅವರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ಸೇರಿದ ಚರಾಸ್ತಿ ಮತ್ತು ಸ್ಥಿರಾಸ್ತಿಗಳು, ಹೊಣೆಗಾರಿಕೆಗಳ ಕುರಿತು ವಿವರಗಳನ್ನು ಸಲ್ಲಿಸಿರಲಿಲ್ಲ ಎಂದು ಮಿಲಾನಿ ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.