ADVERTISEMENT

ಎಸಿಬಿ ಕುರಿತ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ

ಎಸಿಬಿ ಮುಖ್ಯಸ್ಥರ ಸೇವಾ ವರದಿ ಕೇಳಿದ್ದ ನ್ಯಾಯಮೂರ್ತಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2022, 8:40 IST
Last Updated 18 ಜುಲೈ 2022, 8:40 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಹಾಗೂ ಅದರ ಮುಖ್ಯಸ್ಥ ಸೀಮಂತ್‌ ಕುಮಾರ್ ಸಿಂಗ್‌ ಬಗ್ಗೆ ಕರ್ನಾಟಕ ಹೈಕೊರ್ಟ್‌ ನ್ಯಾಯಮೂರ್ತಿ ಎಚ್‌.‍ಪಿ.ಸಂದೇಶ್ ಅವರು ನೀಡಿದ್ದ ಆದೇಶ ಹಾಗೂ ಅಭಿಪ್ರಾಯಗಳಿಗೆ ಸುಪ್ರೀಂ ಕೋರ್ಟ್‌ ಸೋಮವಾರ ತಡೆಯಾಜ್ಞೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ, ನ್ಯಾಯಮೂರ್ತಿ ಕೃಷ್ಣ ಮುರಾರಿ, ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ಮೇಲ್ಮನವಿಯ ವಿಚಾರಣೆ ನಡೆಸಿ, ಜಾಮೀನು ಅರ್ಜಿ ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್‌ ನ್ಯಾಯಮೂರ್ತಿ ನೀಡಿರುವ ಆದೇಶಗಳು ಅಪ್ರಸ್ತುತ ಎಂದು ಅಭಿಪ್ರಾಯಪಟ್ಟು, ಹೈಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ನೀಡಿತು.

‘ಎಸಿಬಿ ಕುರಿತ ಅಭಿಪ್ರಾಯಗಳು, ಎಸಿಬಿ ಮುಖ್ಯಸ್ಥ ಗೋಪ್ಯ ಸೇವಾ ವರದಿ, ಬಿ ಸಾರಾಂಶ ವರದಿ ಕೇಳಿರುವುದಕ್ಕೆ ಪೀಠವು ತಡೆಯಾಜ್ಞೆ ನೀಡುತ್ತಿದೆ. ಜಾಮೀನು ಅರ್ಜಿ ಪ್ರಕರಣದ ವ್ಯಾಪ್ತಿಯಲ್ಲೇ ಅಭಿಪ್ರಾಯಗಳನ್ನು ನೀಡಿಲ್ಲ. ನ್ಯಾಯಮೂರ್ತಿಯವರು ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸಬಹುದು’ ಎಂದು ಪೀಠ ಹೇಳಿತು.

ADVERTISEMENT

ಲಂಚ ಪ್ರಕರಣದಲ್ಲಿ ಆರೋಪಿಯಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪ ತಹಶೀಲ್ದಾರ್ ಪಿ.ಎಸ್‌. ಮಹೇಶ್‌ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್‌, ಎಸಿಬಿ ವಿರುದ್ಧ ಕೆಂಡ ಕಾರಿದ್ದರು.

‘ಭ್ರಷ್ಟಾಚಾರ ನಿಗ್ರಹ ದಳಕ್ಕೆ ಭ್ರಷ್ಟಾಚಾರವೇ ದಂಧೆಯಾಗಿ ಪರಿಣಮಿಸಿದೆ. ಸ್ವಯಂ ಎಸಿಬಿಯೇ ಅತಿದೊಡ್ಡ ಭ್ರಷ್ಟರ ಕೂಪವಾಗಿದೆ. ಇದರ ಮುಖ್ಯಸ್ಥ ಎಡಿಜಿಪಿಯೇ ಕಳಂಕಿತ ಅಧಿಕಾರಿ. ಎಸಿಬಿ ಕಚೇರಿಗಳೆಲ್ಲಾ ಕಲೆಕ್ಷನ್‌ ಸೆಂಟರ್‌ಗಳಾಗಿವೆ. ದೊಡ್ಡ ದೊಡ್ಡ ಐಎಎಸ್‌, ಐಪಿಎಸ್‌ ಅಧಿಕಾರಿಗಳನ್ನ ಹಿಡಿಯೋದು ಬಿಟ್ಟು ಬಾಲಂಗೋಚಿಗಳನ್ನು ಹಿಡಿದುಕೊಂಡು ಕೋರ್ಟಿಗೆ ಬರುತ್ತೀರಿ’ ಎಂದು ನ್ಯಾಯಮೂರ್ತಿ ತರಾಟೆಗೆ ತೆಗೆದುಕೊಂಡಿದ್ದರು.

ಮರುದಿನದ ವಿಚಾರಣೆಯ ವೇಳೆಗೆ ನ್ಯಾಯಮೂರ್ತಿಯವರು, ’ಎಸಿಬಿ ಕಚೇರಿಗಳು ವಸೂಲಿ ಕೇಂದ್ರಗಳಾಗಿವೆ ಎಂದು ತರಾಟೆಗೆ ತೆಗೆದುಕೊಂಡ ಕಾರಣಕ್ಕೆ ವರ್ಗಾವಣೆ ಬೆದರಿಕೆ ಬಂದಿದೆ’ ಎಂದು ಹೇಳಿದ್ದರು.

ಜಾಮೀನು ಅರ್ಜಿಯ ವಿಚಾರಣೆಯ ವೇಳೆ ನ್ಯಾಯಮೂರ್ತಿ ಎಚ್‌.ಪಿ ಸಂದೇಶ್‌ ಅವರು ತಮ್ಮ ಕಾರ್ಯವೈಖರಿ ವಿರುದ್ಧ ಟೀಕಿಸಿದ್ದನ್ನು ಪ್ರಶ್ನಿಸಿ ಎಸಿಬಿ ಎಡಿಜಿಪಿ ಸೀಮಂತ್‌ ಕುಮಾರ್ ಸಿಂಗ್‌ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಕರ್ನಾಟಕ ಸರ್ಕಾರ ಸಹ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಕಳೆದ ಮಂಗಳವಾರ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಜಾಮೀನು ಅರ್ಜಿಯ ವಿಚಾರಣೆಯನ್ನು ಮೂರು ದಿನಗಳ ಕಾಲ ನಡೆಸದಂತೆ ಹೈಕೋರ್ಟ್‌ಗೆ ನಿರ್ದೇಶನ ನೀಡಿತ್ತು.

ವಾದಗಳನ್ನು ಆಲಿಸಿದ ನ್ಯಾಯಪೀಠವು, ಜುಲೈ 11ರಂದು ನೀಡಿದ ಆದೇಶ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಆದೇಶಗಳ ವಿವರ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತ್ತು. ಅದರ ಬೆನ್ನಲ್ಲೇ, ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಜೆ.ಮಂಜುನಾಥ್ ಅವರೂ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಪ್ರಕರಣದ ವ್ಯಾಪ್ತಿ ಮೀರಿ ಹೈಕೋರ್ಟ್‌ ನ್ಯಾಯಮೂರ್ತಿ ಅಭಿಪ್ರಾಯಗಳನ್ನು ನೀಡಿದ್ದಾರೆ ಎಂದು ಅವರು ಅರ್ಜಿಯಲ್ಲಿ ಹೇಳಿದ್ದರು. ಎಲ್ಲ ಮೇಲ್ಮನವಿಗಳನ್ನು ಒಟ್ಟಿಗೆ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಸಮ್ಮತಿ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.