ADVERTISEMENT

ದೇಗುಲಗಳಿಗೆ ಭಕ್ತರು ನೀಡುವ ಕಾಣಿಕೆ ಕಲ್ಯಾಣ ಮಂಟಪ ನಿರ್ಮಿಸಲು ಅಲ್ಲ: ‘ಸುಪ್ರೀಂ’

ಮದ್ರಾಸ್‌ ಹೈಕೋರ್ಟ್‌ನ ಮದುರೈ ಪೀಠದ ಆದೇಶಕ್ಕೆ ತಡೆ ನೀಡಲು ‘ಸುಪ್ರೀಂ’ ನಕಾರ

ಪಿಟಿಐ
Published 16 ಸೆಪ್ಟೆಂಬರ್ 2025, 13:35 IST
Last Updated 16 ಸೆಪ್ಟೆಂಬರ್ 2025, 13:35 IST
–
   

ನವದೆಹಲಿ: ದೇವಸ್ಥಾನಗಳಿಗೆ ಭಕ್ತರು ನೀಡುವ ಕಾಣಿಕೆಯು ಕಲ್ಯಾಣ ಮಂಟಪಗಳನ್ನು ನಿರ್ಮಿಸುವ ಉದ್ದೇಶಕ್ಕೆ ಅಲ್ಲ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.

ಈ ಕುರಿತ ಮೇಲ್ಮನವಿಯ ವಿಚಾರಣೆ ನಡೆಸಿದ, ನ್ಯಾಯಮೂರ್ತಿಗಳಾದ ವಿಕ್ರಮನಾಥ್‌ ಹಾಗೂ ಸಂದೀಪ ಮೆಹ್ತಾ ಅವರು ಇದ್ದ ನ್ಯಾಯಪೀಠ, ‘ಕಲ್ಯಾಣ ಮಂಟಪಗಳನ್ನು ನಿರ್ಮಿಸಬೇಕು ಎಂಬ ಉದ್ದೇಶದಿಂದ ಭಕ್ತರು ದೇವಸ್ಥಾನಗಳಿಗೆ ಕಾಣಿಕೆ ನೀಡುವುದಿಲ್ಲ. ಭಕ್ತರು ನೀಡುವ ಹಣವನ್ನು ದೇಗುಲಗಳ ಸುಧಾರಣೆ, ಸೌಲಭ್ಯಗಳ ಉನ್ನತೀಕರಣಕ್ಕೆ ಬಳಕೆ ಮಾಡಬೇಕು’ ಎಂದು ಹೇಳಿದೆ.

ತಮಿಳುನಾಡಿನ ಐದು ದೇವಸ್ಥಾನಗಳ ನಿಧಿಯನ್ನು ಬಳಸಿ, ಕಲ್ಯಾಣ ಮಂಟಪಗಳನ್ನು ನಿರ್ಮಿಸಲು ಅನುಮತಿ ನೀಡಿ ಸರ್ಕಾರ ಹೊರಡಿಸಿದ್ದ ಆದೇಶಗಳನ್ನು ವಜಾಗೊಳಿಸಿ ಮದ್ರಾಸ್‌ ಹೈಕೋರ್ಟ್‌ನ ಮದುರೈ ಪೀಠವು ಆಗಸ್ಟ್‌ 19ರಂದು ಆದೇಶಿಸಿತ್ತು.

ADVERTISEMENT

ಈ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಪೀಠವು, ಮದುರೈ ಪೀಠದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿ ತೀರ್ಪು ನೀಡುವ ವೇಳೆ ಈ ಮಾತು ಹೇಳಿದೆ.

ದೇವಸ್ಥಾನಗಳಲ್ಲಿ ಸಂಗ್ರಹವಾಗುವ ಕಾಣಿಕೆ ಬಳಸಿ ಕಲ್ಯಾಣ ಮಂಟಪಗಳನ್ನು ನಿರ್ಮಿಸಿ, ಅವುಗಳನ್ನು ಬಾಡಿಗೆಗೆ ಕೊಡಬೇಕು ಎಂಬ ಸರ್ಕಾರದ ನಿರ್ಧಾರವು ‘ಧಾರ್ಮಿಕ ಉದ್ದೇಶ’ಗಳ ವ್ಯಾಪ್ತಿಗೆ ಬರುವುದಿಲ್ಲ. ಈ ಹಣವನ್ನು ಸಾರ್ವಜನಿಕ ಅಥವಾ ಸರ್ಕಾರದ ನಿಧಿ ಎಂಬುದಾಗಿ ಪರಿಗಣಿಸಬಾರದು’ ಎಂದೂ ಮದುರೈ ಪೀಠ ಹೇಳಿತ್ತು.

ವಿಚಾರಣೆ ವೇಳೆ, ‘ದೇವಸ್ಥಾನ ಆವರಣದಲ್ಲಿ ನಿರ್ಮಿಸಿರುವ ಕಲ್ಯಾಣ ಮಂಟಪದಲ್ಲಿ ಒಂದು ಮದುವೆ ಸಮಾರಂಭವಿತ್ತು ಎಂದು ಭಾವಿಸೋಣ. ಅಲ್ಲಿ, ಎಲ್ಲ ರೀತಿಯ ಅಶ್ಲೀಲ ಹಾಡುಗಳನ್ನು ಹಾಡಲಾಗುತ್ತದೆ. ಈ ರೀತಿ ಮಾಡುವುದರಿಂದ ದೇವಸ್ಥಾನದ ಜಾಗದ ಬಳಕೆಯ ಉದ್ದೇಶ ಈಡೇರಿದಂತಾಗಲಿದೆಯೇ’ ಎಂದು ಪೀಠ ಪ್ರಶ್ನಿಸಿದೆ.

‘ಕಲ್ಯಾಣ ಮಂಟಪಗಳನ್ನು ನಿರ್ಮಿಸಬೇಕು ಎನ್ನುವ ಸರ್ಕಾರದ ನಿರ್ಧಾರ ಸರಿ ಇದೆಯೋ ಅಥವಾ ತಪ್ಪಿದೆಯೋ ಎಂಬುದೇ ನಮ್ಮ ಮುಂದಿರುವ ವಿಚಾರ. ಹೀಗಾಗಿ, ಈ ಹಂತದಲ್ಲಿ ನಾವು ಯಾವುದೇ ತಡೆಯಾಜ್ಞೆ ನೀಡುವುದಿಲ್ಲ’ ಎಂದ ಪೀಠ, ವಿಚಾರಣೆಯನ್ನು ನವೆಂಬರ್ 19ಕ್ಕೆ ಮುಂದೂಡಿತು.

ಶಿಕ್ಷಣ ವೈದ್ಯಕೀಯ ಸಂಸ್ಥೆಗಳಿಗೆ ನೆರವು ನೀಡುವುದು ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಗಳಿಗೆ ದೇವಸ್ಥಾನಗಳ ಹಣ ಬಳಕೆ ಮಾಡಬಹುದು
ಸುಪ್ರೀಂ ಕೋರ್ಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.