ADVERTISEMENT

ಪಡಿತರ ಚೀಟಿ ರದ್ದು: ಪ್ರತಿಕ್ರಿಯಿಸಲು ಕೇಂದ್ರ, ರಾಜ್ಯಗಳಿಗೆ ‘ಸುಪ್ರೀಂ’ ನೋಟಿಸ್‌

ಆಧಾರ್ ಕಾರ್ಡ್ ಜೋಡಣೆಯಾಗದ ಪಡಿತರ ಚೀಟಿ ರದ್ಧಗೊಳಿಸಲು ಕೇಂದ್ರ ನಿರ್ಧಾರ

ಪಿಟಿಐ
Published 17 ಮಾರ್ಚ್ 2021, 9:05 IST
Last Updated 17 ಮಾರ್ಚ್ 2021, 9:05 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಆಧಾರ್ ಜೋಡಣೆಯಾಗದ ಕಾರಣವೊಡ್ಡಿ ಅಂದಾಜು 3 ಕೋಟಿ ಪಡಿತರ ಚೀಟಿಗಳನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರ ನಿರ್ಧಾರ ತುಂಬಾ ಗಂಭೀರ ವಿಷಯ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂಕೋರ್ಟ್, ಈ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಮತ್ತು ಎಲ್ಲ ರಾಜ್ಯ ಸರ್ಕಾರಗಳಿಗೆ ಬುಧವಾರ ಸೂಚನೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌.ಎ ಬೊಬಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯಪೀಠವು, ‘ಪಡಿತರ ಚೀಟಿ ರದ್ದುಗೊಳಿಸುವುದು ಒಂದು ಗಂಭೀರ ವಿಚಾರ. ಹೀಗಾಗಿರುವುದು ದುರದೃಷ್ಟಕರ ಎಂದು ಹೇಳಿ ಸುಮ್ಮನಾಗುವಂತಿಲ್ಲ‘ ಎಂದು ಅಭಿಪ್ರಾಯಪಟ್ಟಿತು.

ಅರ್ಜಿದಾರರಾದ ಕೊಯಿಲಿ ದೇವಿ ಪರ ಹಾಜರಾದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್, ‘ತೊಂದರೆಗೆ ಒಳಗಾಗಿರುವ ಬಹಳಷ್ಟು ಜನರ ಪರವಾಗಿ ಈ ಅರ್ಜಿಯನ್ನು ಸಲ್ಲಿಸಲಾಗಿದೆ. ಪಡಿತರ ಚೀಟಿ ರದ್ದತಿ ಹಾಗೂ ಹಸಿವಿನಿಂದ ಸಾವು ಸಂಭವಿಸುತ್ತಿರುವುದು ಕಳವಳಕಾರಿ ಸಂಗತಿ’ ಎಂದರು.

ADVERTISEMENT

‘ಕೇಂದ್ರ ಸರ್ಕಾರ ಪಡಿತರ ಚೀಟಿಗಳನ್ನು ರದ್ದುಗೊಳಿಸುವುದಾಗಿ ಗೊನ್ಸಾಲ್ವೆಸ್‌ ಸುಳ್ಳು ಹೇಳುತ್ತಿದ್ದಾರೆ’ ಎಂದು ಹೆಚ್ಚುವರಿ ಸಾಲಿಟರ್‌ ಜನರಲ್‌ ಅಮನ್‌ ಲೇಖಿ ವಾದಿಸಿದರು.

ಆಗ ನ್ಯಾಯಪೀಠವು, ‘ಈ ವಿಷಯ ಆಧಾರ್‌ ಜೋಡಣೆ ಒಳಗೊಂಡಿರುವ ಕಾರಣ ಕೇಂದ್ರದಿಂದ ಪ್ರತಿಕ್ರಿಯೆ ಕೇಳುತ್ತಿದ್ದೇವೆ. ನಾಲ್ಕು ವಾರದೊಳಗಾಗಿ ಪ್ರತಿಕ್ರಿಯೆ ಸಲ್ಲಿಸಿ’ ಎಂದು ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.