ಸುಪ್ರೀಂ ಕೋರ್ಟ್
ನವದೆಹಲಿ: ಪಿತ್ರಾರ್ಜಿತ ಆಸ್ತಿ ನಿರ್ವಹಿಸಲು ಮುಸ್ಲಿಮರು ತಮ್ಮ ಧರ್ಮ ತ್ಯಜಿಸದೆ ಶರಿಯತ್ ಬದಲು ಧರ್ಮನಿರಪೇಕ್ಷ ಭಾರತದ ಉತ್ತರಾಧಿಕಾರ ಕಾನೂನು ಆಯ್ಕೆ ಮಾಡಿಕೊಳ್ಳಬಹುದೇ ಎನ್ನುವ ವಿವಾದಾತ್ಮಕ ವಿಚಾರವನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ನೀಡಿದೆ.
ಕೇರಳದ ತ್ರಿಶೂರ್ ಜಿಲ್ಲೆಯ ನೌಶಾದ್ ಕೆ.ಕೆ ಎನ್ನುವವರು ಇಸ್ಲಾಂ ಧರ್ಮ ತ್ಯಜಿಸದೆ ಶರಿಯತ್ ಬದಲಿಗೆ ಉತ್ತರಾಧಿಕಾರ ಕಾನೂನು ಲಾಗೂ ಮಾಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠ ವಿಚಾರಣೆಗೆ ಒಪ್ಪಿತು.
ಅರ್ಜಿಯನ್ನು ಪುಸಸ್ಕರಿಸಿದ ಕೋರ್ಟ್, ಕೇಂದ್ರ ಮತ್ತು ಕೇರಳ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ಅವರ ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ಕೇಳಿದೆ. ಅಲ್ಲದೇ ಬಾಕಿ ಇರುವ ಇದೇ ರೀತಿಯ ಪ್ರಕರಣಗಳನ್ನು ಸೇರಿಸಲು ಪೀಠ ಆದೇಶಿಸಿದೆ.
ತಾನು ನಾಸ್ತಿಕ ಮುಸ್ಲಿಮಳಾಗಿದ್ದು, ಶರಿಯತ್ ಬದಲಿಗೆ ಉತ್ತರಾಧಿಕಾರ ಕಾನೂನುಗಳ ಅಡಿಯಲ್ಲಿ ಪೂರ್ವಜರ ಆಸ್ತಿಗಳನ್ನು ನಿಭಾಯಿಸಲು ಬಯಸಿದ್ದಾರೆ ಎಂದು ಅಲಪ್ಪುಳ ನಿವಾಸಿ, 'ಮಾಜಿ ಮುಸ್ಲಿಮರು ಕೇರಳ' ಇದರ ಪ್ರಧಾನ ಕಾರ್ಯದರ್ಶಿ ಸಫಿಯಾ ಪಿ.ಎಂ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲು ಪೀಠ ಕಳೆದ ವರ್ಷದ ಏಪ್ರಿಲ್‌ನಲ್ಲಿ ಒಪ್ಪಿಕೊಂಡಿತ್ತು.
'ಕುರಾನ್ ಸುನ್ನತ್ ಸೊಸೈಟಿ' 2016 ರಲ್ಲಿ ಸಲ್ಲಿಸಿದ ಇದೇ ರೀತಿಯ ಮತ್ತೊಂದು ಅರ್ಜಿಯೂ ಸಹ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದ್ದು, ಅದು ಈಗ ಮೂರು ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.