ನವದೆಹಲಿ: ಬೀದಿ ನಾಯಿ ಸಮಸ್ಯೆಯ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಕುರಿತು ಮುಂದಿನ ಕ್ರಮ ಕೈಗೊಳ್ಳಲು ಸದ್ಯದಲ್ಲೇ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ದೆಹಲಿಯ ಎಲ್ಲಾ ನಿವಾಸಿ ಕಲ್ಯಾಣ ಸಂಘಗಳ(ಆರ್‌ಡಬ್ಲ್ಯೂಎ) ಸಭೆ ಕರೆಯಲಾಗಿದೆ ಎಂದು ಬಿಜೆಪಿ ನಾಯಕ ವಿಜಯ್ ಗೋಯಲ್ ಅವರು ಬುಧವಾರ ತಿಳಿಸಿದ್ದಾರೆ.
ದೆಹಲಿಯ ಬಂಗಾಳಿ ಮಾರುಕಟ್ಟೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದ್ದಾರೆ.
ದೆಹಲಿಯಲ್ಲಿರುವ ಬೀದಿ ನಾಯಿಗಳನ್ನು ಸ್ಥಳಾಂತರ ಮಾಡಬೇಕು ಎಂದು ಆಗಸ್ಟ್ 11ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.
ಸುಪ್ರೀಂ ಕೋರ್ಟ್‌ನ ತೀರ್ಪನ್ನು ಸ್ವಾಗತಿಸಿರುವ ಗೋಯಲ್, ‘ದೆಹಲಿಯ ಬೀದಿಗಳ ಸುರಕ್ಷತೆಗಾಗಿ ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌ಗೆ ಧನ್ಯವಾದಗಳು. ಇದನ್ನು ಕೇಂದ್ರ ಸರ್ಕಾರವು ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.
‘ಬೀದಿ ನಾಯಿ ಸಮಸ್ಯೆಯ ಕುರಿತು ಆರ್‌ಡಬ್ಲ್ಯೂಎ ನನ್ನ ಗಮನಕ್ಕೆ ತಂದಿತ್ತು. ಕಳೆದ ಎರಡು ವರ್ಷಗಳಿಂದ ‘ಲೋಕ ಅಭಿಯಾನ’ ಹೆಸರಿನ ಎನ್‌ಜಿಒ ಮೂಲಕ, ಇದರ ವಿರುದ್ಧ ಚಳುವಳಿ ಮಾಡುತ್ತಿದ್ದೇವೆ. ಸಮಸ್ಯೆಯನ್ನು ಬಗೆಹರಿಸಲು ಒತ್ತಾಯಿಸುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.
ಬೀದಿ ನಾಯಿಗಳ ದಾಳಿಗೆ ತುತ್ತಾದವರಿಗೆ ಪರಿಹಾರ ನೀಡಬೇಕು ಎಂದು ಗೋಯಲ್ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.