
ನವದೆಹಲಿ: ನ್ಯಾಯಾಧೀಶರ ವೃತ್ತಿಯ ಪ್ರಗತಿಯಲ್ಲಿನ ನಿಧಾನಗತಿ ಮತ್ತು ಅಸಮಾನತೆಯನ್ನು ಸರಿಪಡಿಸಲು ಜ್ಯೇಷ್ಠತಾ ಪಟ್ಟಿ ತಯಾರಿಸುವಲ್ಲಿ ಏಕರೂಪದ, ದೇಶದಾದ್ಯಂತ ಅನ್ವಯವಾಗುವ ಮಾನದಂಡವನ್ನು ರೂಪಿಸುವುದರ ಕುರಿತ ತನ್ನ ತೀರ್ಪನ್ನು ಸುಪ್ರೀಂ ಕೋರ್ಟ್ ಮಂಗಳವಾರ ಕಾಯ್ದಿರಿಸಿದೆ.
ವಕೀಲ ಮತ್ತು ಅಮಿಕಸ್ ಕ್ಯೂರಿ ಸಿದ್ಧಾರ್ಥ ಭಟ್ನಾಗರ್, ರಾಕೇಶ್ ದ್ವಿವೇದಿ, ಪಿ.ಎಸ್.ಪಟವಾಲಿಯಾ, ಜಯಂತ ಭೂಷಣ್ ಮತ್ತು ಗೋಪಾಲ ಶಂಕರನಾರಾಯಣನ್ ಸೇರಿದಂತೆ ಹಿರಿಯ ವಕೀಲರ ವಾದ ಆಲಿಸಿದ ಬಳಿಕ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ತೀರ್ಪನ್ನು ಕಾಯ್ದಿರಿಸಿರುವುದಾಗಿ ತಿಳಿಸಿತು.
ಉನ್ನತ ನ್ಯಾಯಾಂಗ ಸೇವೆಯ ವೃಂದಗಳಲ್ಲಿ ಹಿರಿತನವನ್ನು ನಿರ್ಧರಿಸಲು ರಾಷ್ಟ್ರದಾದ್ಯಂತ ಅನ್ವಯವಾಗುವ ಮಾನದಂಡ ರೂಪಿಸಲು ಚಿಂತನೆ ನಡೆಸುತ್ತಿರುವ ಪೀಠದಲ್ಲಿ ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ವಿಕ್ರಮ ನಾಥ್, ಕೆ. ವಿನೋದ ಚಂದ್ರನ್ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರೂ ಇದ್ದಾರೆ.
‘ಹೆಚ್ಚಿನ ರಾಜ್ಯಗಳಲ್ಲಿ, ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡವರಲ್ಲಿ ಬಹುತೇಕ ಮಂದಿ ಪ್ರಧಾನ ಜಿಲ್ಲಾ ನ್ಯಾಯಾಧೀಶರ ಸ್ಥಾನವನ್ನೂ ತಲುಪುವುದಿಲ್ಲ. ಹೈಕೋರ್ಟ್ ನ್ಯಾಯಮೂರ್ತಿಯ ಸ್ಥಾನ ತಲುಪುವುದು ದೂರದ ಮಾತೇ ಸರಿ. ಇದರಿಂದಾಗಿ ಅನೇಕ ಪ್ರತಿಭಾವಂತ ಯುವ ವಕೀಲರು ಸಿವಿಲ್ ನ್ಯಾಯಾಧೀಶರ ಹಂತದಲ್ಲಿ ನ್ಯಾಯಾಂಗ ಸೇವೆ ಸೇರುವುದಕ್ಕೆ ಒಲ್ಲದ ಪರಿಸ್ಥಿತಿ ಇದೆ’ ಎಂಬುದನ್ನು ಪೀಠವು ಗಮನಿಸಿತು.
ಅಂತಹ ನ್ಯಾಯಾಧೀಶರ ವೃತ್ತಿಯ ಪ್ರಗತಿಯಲ್ಲಿನ ನಿಧಾನಗತಿ ಮತ್ತು ಅಸಮಾನತೆಯನ್ನು ಸರಿಪಡಿಸಲು ದೇಶದಾದ್ಯಂತ ಏಕರೂಪದ ಮಾನದಂಡದ ಅಗತ್ಯವಿದೆ ಎಂದು ಹೇಳಿತು.
ಅಲಹಾಬಾದ್ ಹೈಕೋರ್ಟ್ ಪರವಾಗಿ ವಾದ ಮಂಡಿಸಿದ ರಾಕೇಶ್ ದ್ವಿವೇದಿ, ಜ್ಯೇಷ್ಠತೆ ನಿರ್ಧರಿಸಲು ಏಕರೂಪದ ಮಾನದಂಡ ರೂಪಿಸದಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದರು.
‘ಈ ವಿಷಯವನ್ನು ಹೈಕೋರ್ಟ್‌ಗಳ ವಿವೇಚನೆಗೆ ಬಿಡಬೇಕು. ಏಕೆಂದರೆ, ಅಧೀನ ನ್ಯಾಯಾಲಯಗಳ ಆಡಳಿತವನ್ನು ನಿರ್ವಹಿಸುವ ಸಾಂವಿಧಾನಿಕ ಅಧಿಕಾರವನ್ನು ಹೈಕೋರ್ಟ್‌ಗಳು ಹೊಂದಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.