
ಸುಪ್ರೀಂ ಕೋರ್ಟ್
ನವದೆಹಲಿ: ಚುನಾವಣಾ ಪ್ರಕ್ರಿಯೆಗೆ ಇನ್ನೂ ಚಾಲನೆ ಸಿಗದ ರಾಜ್ಯ ವಕೀಲರ ಪರಿಷತ್ತುಗಳಲ್ಲಿ ಶೇ 30ರಷ್ಟು ಸ್ಥಾನಗಳನ್ನು ಮಹಿಳಾ ವಕೀಲರಿಗೆ ನಿಗದಿಪಡಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠವು, ‘ರಾಜ್ಯ ವಕೀಲರ ಪರಿಷತ್ತುಗಳಲ್ಲಿ ಶೇ 30ರಷ್ಟು ಸ್ಥಾನಗಳನ್ನು ಮಹಿಳಾ ವಕೀಲರು ಪ್ರತಿನಿಧಿಸಬೇಕು. ಅದರಲ್ಲಿ ಶೇ 20ರಷ್ಟು ಸ್ಥಾನಗಳನ್ನು ಚುನಾವಣೆ ಮೂಲಕ ಮತ್ತು ಶೇ 10ರಷ್ಟು ಸ್ಥಾನಗಳನ್ನು ನಾಮ ನಿರ್ದೇಶನದ ಮೂಲಕ ಭರ್ತಿ ಮಾಡಬೇಕು’ ಎಂದು ಹೇಳಿತು.
ಚುನಾವಣೆಯಲ್ಲಿ ಸ್ಪರ್ಧಿಸುವ ಮಹಿಳಾ ವಕೀಲರ ಸಂಖ್ಯೆ ಕಡಿಮೆಯಿದ್ದರೆ, ಅಂತರ ರಾಜ್ಯಗಳ ವಕೀಲರ ಪರಿಷತ್ತುಗಳಲ್ಲಿ ನಾಮ ನಿರ್ದೇಶನಕ್ಕೆ ಸಂಬಂಧಿಸಿದ ಪ್ರಸ್ತಾಪವನ್ನು ನ್ಯಾಯಾಲಯದ ಮುಂದೆ ಇಡಬೇಕು ಎಂದೂ ನಿರ್ದೇಶಿಸಿದೆ.
ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿರುವ ನಿರ್ದೇಶನದಂತೆ ಆರು ರಾಜ್ಯಗಳ ವಕೀಲರ ಪರಿಷತ್ತುಗಳ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಭಾರತೀಯ ವಕೀಲರ ಪರಿಷತ್ತಿನ (ಬಿಸಿಐ) ಅಧ್ಯಕ್ಷರೂ ಆಗಿರುವ ಹಿರಿಯ ವಕೀಲ ಮನನ್ ಕುಮಾರ್ ಮಿಶ್ರಾ ಅವರು ಪೀಠಕ್ಕೆ ತಿಳಿಸಿದರು.
‘ಶೇ 15ರಷ್ಟು ಸ್ಥಾನಗಳನ್ನು ಮಹಿಳಾ ಸದಸ್ಯರ ನಾಮ ನಿರ್ದೇಶನದ ಮೂಲಕ ಭರ್ತಿ ಮಾಡಿಕೊಳ್ಳಲು ಅವಕಾಶ ನೀಡಬೇಕು’ ಎಂದು ಅವರು ಪೀಠಕ್ಕೆ ಮನವಿ ಮಾಡಿದರು. ಆದರೆ, ‘ನಾಮ ನಿರ್ದೇಶನವನ್ನು ಶೇ 10ರಷ್ಟು ಸೀಟುಗಳಿಗೆ ಸೀಮಿತಗೊಳಿಸಿದರೆ ಸೂಕ್ತ’ ಎಂದು ಪೀಠ ತಿಳಿಸಿತು.
ಈಗಾಗಲೇ ಚುನಾವಣಾ ಪ್ರಕ್ರಿಯೆ ಆರಂಭವಾಗಿರುವ ಪರಿಷತ್ತುಗಳಲ್ಲಿ ಮಹಿಳೆಯರಿಗೆ ಸ್ಥಾನಗಳನ್ನು ಮೀಸಲಿಡುವುದು ವಿವೇಕಯುತ ನಿರ್ಧಾರವಲ್ಲ ಎಂದೂ ಪೀಠ ಹೇಳಿತು.
ಆಂಧ್ರ ಪ್ರದೇಶ, ಪಂಜಾಬ್ ಮತ್ತು ಹರಿಯಾಣ, ಉತ್ತರ ಪ್ರದೇಶ, ತೆಲಂಗಾಣ, ಬಿಹಾರ ಹಾಗೂ ಛತ್ತೀಸಗಢ ರಾಜ್ಯಗಳ ವಕೀಲರ ಪರಿಷತ್ತುಗಳ ಚುನಾವಣೆಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ ಎಂದಿತು.
‘ಮಹಿಳೆಯರು ಸ್ಪರ್ಧಿಸಲು ಹಿಂಜರಿಯುವಂತಹ ಪರಿಷತ್ತುಗಳಲ್ಲಿ ನಾಮ ನಿರ್ದೇಶನ ಪ್ರಕ್ರಿಯೆ ಕೈಗೊಳ್ಳಲಾಗುವುದು. ಅಂತಿಮವಾಗಿ ಕಾರ್ಯಕಾರಿ ಮಂಡಳಿಯಲ್ಲಿ ಮಹಿಳೆಯರಿಗೆ ಶೇ 30ರಷ್ಟು ಪ್ರಾತಿನಿಧ್ಯ ಸಿಗುವುದನ್ನು ಖಾತರಿಪಡಿಸಬೇಕು’ ಎಂದು ಹೇಳಿತು.
ಎಲ್ಲಾ ರಾಜ್ಯಗಳ ವಕೀಲರ ಪರಿಷತ್ತುಗಳಲ್ಲಿ ಮೂರನೇ ಒಂದರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕೆಂದು ಕೋರಿ ವಕೀಲರಾದ ಯೋಗಮಾಯಾ ಎಂ.ಜಿ ಮತ್ತು ಶೆಹ್ಲಾ ಚೌಧರಿ ಅವರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.