ADVERTISEMENT

ರಾಜಕೀಯಕ್ಕೆ ನಿರ್ದಿಷ್ಟ ದಾಳಿ ದುರ್ಬಳಕೆ: ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಹೂಡಾ

ಪ್ರಧಾನಿ ಮೇಲೆ ಮುಗಿಬಿದ್ದ ಕಾಂಗ್ರೆಸ್‌

ಪಿಟಿಐ
Published 8 ಡಿಸೆಂಬರ್ 2018, 16:17 IST
Last Updated 8 ಡಿಸೆಂಬರ್ 2018, 16:17 IST
ಡಿ.ಎಸ್‌. ಹೂಡಾ
ಡಿ.ಎಸ್‌. ಹೂಡಾ   

ಚಂಡಿಗಡ: ಎರಡು ವರ್ಷಗಳ ಹಿಂದೆ ಪಾಕಿಸ್ತಾನದ ಗಡಿ ದಾಟಿ ಸೇನೆ ನಡೆಸಿದ ನಿರ್ದಿಷ್ಟ ದಾಳಿಯ ಬಗ್ಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಚಾರ ಮಾಡಲಾಗುತ್ತಿದೆ ಎಂದು ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಡಿ.ಎಸ್. ಹೂಡಾ ಶನಿವಾರ ಅಸಮಾಧಾನ ಹೊರ ಹಾಕಿದ್ದಾರೆ.

‘ವೈರಿ ನೆಲೆಯ ಮೇಲೆ ಇಂತಹ ದಾಳಿ ಮತ್ತು ಕಾರ್ಯಾಚರಣೆ ಸಾಮಾನ್ಯ. ಯೋಧರ ಮಾನಸಿಕ ಬೆಂಬಲಕ್ಕೆ ಆರಂಭದಲ್ಲಿ ಇಂತಹ ಪ್ರಚಾರ ಸಹಜ. ಆದರೆ, ಅತಿಯಾದ ಪ್ರಚಾರ ಮತ್ತು ಅದನ್ನೇ ರಾಜಕೀಯ ಅಸ್ತ್ರವಾಗಿ ಬಳಸುವ ಪ್ರವೃತ್ತಿ ಸರಿಯಲ್ಲ’ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಪಾಕಿಸ್ತಾನ ಗಡಿಯಲ್ಲಿ 2016ರಲ್ಲಿ ನಿರ್ದಿಷ್ಟ ದಾಳಿ ನಡೆದ ಸಂದರ್ಭದಲ್ಲಿ ಹೂಡಾ ಅವರು ಆರ್ಮಿ ಕಮಾಂಡರ್‌ ಆಗಿದ್ದವರು.

ADVERTISEMENT

ಪಂಜಾಬ್‌ ಸರ್ಕಾರ ಆಯೋಜಿಸಿರುವ ಎರಡು ದಿನಗಳ ಸೇನಾ ಸಾಹಿತ್ಯ ಉತ್ಸವದ ಚರ್ಚೆಯಲ್ಲಿ ಅವರು, ‘ಗಡಿಯಾಚೆಗೆ ಸೇನಾ ಕಾರ್ಯಾಚರಣೆ ಮತ್ತು ನಿರ್ದಿಷ್ಟ ದಾಳಿಯ ಪಾತ್ರ’ ವಿಷಯ ಕುರಿತು ಮಾತನಾಡಿದರು.

ಇಂತಹ ಸೇನಾ ಕಾರ್ಯಾಚರಣೆಗಳು ರಾಜಕಾರಣದ ಅಸ್ತ್ರಗಳಾಗದಂತೆ ಸೇನೆಯ ಉನ್ನತ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಯಾರೊಬ್ಬರ ರಾಜಕೀಯ ನೀತಿ, ನಿಲುವುಗಳಿಗೆ ಅನುಗುಣವಾಗಿ ಸೇನೆ ಕಾರ್ಯಾಚರಣೆ ಕೈಗೊಳ್ಳುವುದಿಲ್ಲ ಎಂದು ಹೂಡಾ ಸ್ಪಷ್ಟಪಡಿಸಿದರು.

ಸೇನಾ ಕಾರ್ಯಾಚರಣೆಗಳನ್ನು ಸೇನೆ ಮತ್ತು ಸರ್ಕಾರ ರಹಸ್ಯವಾಗಿಡಬೇಕು. ಅವನ್ನು ಬಹಿರಂಗಗೊಳಿಸಬಾರದು ಎಂದು ಅವರು ಸಲಹೆ ನೀಡಿದರು.

ರಾಜಕೀಯ ಬಣ್ಣ–ಆಕ್ಷೇಪ: ನಿರ್ದಿಷ್ಟ ದಾಳಿಗೆ ರಾಜಕೀಯ ಬಣ್ಣ ಬಳಿದಿದ್ದು ಸರಿಯಲ್ಲ ಎಂದು ಸೇನಾ ವಿಶ್ಲೇಷಕ ಹಾಗೂ ನಿವೃತ್ತ ಕರ್ನಲ್‌ ಅಜಯ್‌ ಶುಕ್ಲಾ ಅತೃಪ್ತಿ ಹೊರ ಹಾಕಿದರು.

ನಿರ್ದಿಷ್ಟ ಕಾರ್ಯಾಚಾರಣೆಯು ಮೋದಿ ಸರ್ಕಾರದ ಸಾಧನೆಯ ತುತ್ತೂರಿಯಾದ ಕಾರಣ ಮಹತ್ವ ಕಳೆದುಕೊಂಡಿತು. ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವು ಮತ್ತು ಮೋದಿ ಸರ್ಕಾರದ ವರ್ಚಸ್ಸು ಹೆಚ್ಚಿಸಲು ನಿರ್ದಿಷ್ಟ ದಾಳಿಯನ್ನು ಬಳಸಿಕೊಳ್ಳಲಾಯಿತು ಎಂದು ಅವರು ತರಾಟೆಗೆ ತೆಗೆದುಕೊಂಡರು.

ಚರ್ಚೆಯಲ್ಲಿ ಭಾಗವಹಿಸಿದ್ದ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಎನ್‌.ಎಸ್‌. ಬ್ರಾರ್‌ ಸೇರಿದಂತೆ ನಿವೃತ್ತ ಕಮಾಂಡರ್‌, ಲೆಫ್ಟಿನೆಂಟ್‌ ಕರ್ನಲ್‌, ಜನರಲ್‌ಗಳು ‘ಸೇನಾ ಕಾರ್ಯಾಚರಣೆಯ ರಾಜಕೀಯ ದುರ್ಬಳಕೆ’ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಪಂಜಾಬ್‌ ರಾಜ್ಯಪಾಲ ವಿ.ಪಿ. ಸಿಂಗ್‌ ಬಡ್ನೋರ್‌ ಅವರು ಸೇನಾ ಸಾಹಿತ್ಯ ಉತ್ಸವದ ಎರಡನೇಆವೃತ್ತಿಯನ್ನು ಉದ್ಘಾಟಿಸಿದರು.

ಪ್ರಧಾನಿಗೆ ರಾಜಕೀಯ ಬಂಡವಾಳ: ರಾಹುಲ್ ಗಾಂಧಿ

ಸೇನೆ ನಡೆಸಿದ ನಿರ್ದಿಷ್ಟ ದಾಳಿಯ ಶ್ರೇಯಸ್ಸನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯ ದಾಳ ಮತ್ತು ಬಂಡವಾಳವಾಗಿ ಬಳಸಿಕೊಂಡಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಶನಿವಾರ ಆರೋಪಿಸಿದ್ದಾರೆ.

ನಿರ್ದಿಷ್ಟ ದಾಳಿಯ ಬಗ್ಗೆ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಡಿ.ಎಸ್. ಹೂಡಾ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ರಾಹುಲ್‌ ಸರಣಿ ಟ್ವೀಟ್‌ ಮಾಡಿದ್ದಾರೆ.

‘ಪ್ರಧಾನಿಯ ಕೀಳು ಮಟ್ಟದ ರಾಜಕೀಯವನ್ನು ಬಯಲುಗೊಳಿಸಿದ ನಿಮ್ಮ ಬಗ್ಗೆ ಅಪಾರ ಗೌರವ ಹೆಚ್ಚಾಗಿದೆ. ನೀವು ನಿಜವಾದ ಯೋಧ’ ಎಂದು ಅವರು ಟ್ವೀಟ್‌ನಲ್ಲಿ ಹೂಡಾ ಅವರನ್ನು ಅಭಿನಂದಿಸಿದ್ದಾರೆ.

*****

ಸೇನಾ ಕಾರ್ಯಾಚರಣೆಗಳನ್ನು ಚುನಾವಣೆ ಗೆಲ್ಲಲ್ಲು ಬಳಸಿಕೊಳ್ಳುತ್ತಿರುವುದು ವಿಷಾದದ ಸಂಗತಿ ಮತ್ತು ಅಷ್ಟೇ ಅಪಾಯಕಾರಿ ಬೆಳವಣಿಗೆ.

– ಎನ್‌.ಎಸ್‌. ಬ್ರಾರ್‌, ನಿವೃತ್ತ ಲೆಫ್ಟಿನೆಂಟ್‌ ಜನರಲ್‌

ನಿರ್ದಿಷ್ಟ ಕಾರ್ಯಾಚಾರಣೆಯಲ್ಲಿ ಡಿ.ಎಸ್. ಹೂಡಾ ಪ್ರಮುಖ ಪಾತ್ರ ವಹಿಸಿದ್ದ ಕಾರಣ ಅವರ ಅಭಿಪ್ರಾಯವನ್ನು ನಾನು ಗೌರವಿಸುತ್ತೇನೆ.

– ಬಿಪಿನ್‌ ರಾವತ್‌, ಸೇನಾ ಮುಖ್ಯಸ್ಥ

ರಹಸ್ಯವಾಗಿಡಬೇಕಿದ್ದ ಕಾರ್ಯಾಚಾರಣೆಯನ್ನು ರಾಜಕೀಯ ಸ್ವಾರ್ಥಕ್ಕಾಗಿ ಬಹಿರಂಗಗೊಳಿಸಿದ್ದಾರೆ. ರಾಷ್ಟ್ರದ ಹಿತಾಸಕ್ತಿಯನ್ನು ಬಲಿಕೊಟ್ಟಿದ್ದಾರೆ.

–ರಣದೀಪ್‌ ಸುರ್ಜೇವಾಲಾ, ಕಾಂಗ್ರೆಸ್‌ ಮುಖ್ಯ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.