ADVERTISEMENT

ಅಯೋಧ್ಯೆ | ರಾಮನವಮಿಯಂದು ಬಾಲರಾಮನ ಹಣೆ ಮೇಲೆ ಮೂಡಲಿದೆ ಸೂರ್ಯ ತಿಲಕ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಏಪ್ರಿಲ್ 2024, 10:51 IST
Last Updated 13 ಏಪ್ರಿಲ್ 2024, 10:51 IST
<div class="paragraphs"><p>ಅಯೋಧ್ಯೆ ಬಾಲರಾಮ</p></div>

ಅಯೋಧ್ಯೆ ಬಾಲರಾಮ

   

ಲಖನೌ: ರಾಮಮಂದಿರ ನಿರ್ಮಾಣಗೊಂಡ ನಂತರ ಆಚರಿಸಲಾಗುತ್ತಿರುವ ಮೊದಲ ರಾಮನವಮಿಗೆ ಅಯೋಧ್ಯೆಯ ರಾಮಮಂದಿರದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಇದರ ನಡುವೆಯೇ ಗರ್ಭಗುಡಿಯಲ್ಲಿ ವಿರಾಜಮಾನನಾಗಿರುವ ಬಾಲರಾಮನ ಹಣೆಗೆ ರಾಮನವಮಿಯ ದಿನದಂದು ಸೂರ್ಯನ ಕಿರಣ ಮುತ್ತಿಕ್ಕುವ ಗಳಿಗೆಯನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರರಾಗಿದ್ದಾರೆ.

ADVERTISEMENT

ಏ. 17ರಂದು ದೇಶದಾದ್ಯಂತ ರಾಮನವಮಿ ಆಚರಿಸಲಾಗುತ್ತಿದೆ. ಪ್ರತಿಷ್ಠಾಪನೆಗೊಂಡ ಬಾಲರಾಮನ ಮೂರ್ತಿಯ ಹಣೆಗೆ ಸೂರ್ಯನ ಕಿರಣಗಳು ಮುತ್ತಿಕ್ಕುವಂತೆ ವಿನ್ಯಾಸಗೊಳಿಸಿರುವ ವಾಸ್ತುಶಿಲ್ಪದ ಕೌಶಲಕ್ಕೂ ಅದೇ ದಿನ ಸಾಕ್ಷಿಯಾಗಲಿದೆ. ಇದರ ಪ್ರಯೋಗಾತ್ಮಕ ಪರೀಕ್ಷೆ ಯಶಸ್ವಿಯಾಗಿ ಅಯೋಧ್ಯೆಯಲ್ಲಿ ನಡೆದಿದೆ.

ರಾಮನವಿಯಂದು ರಾಮ ಜನಿಸಿದ ಸಮಯಕ್ಕೆ ಸರಿಯಾಗಿ ಸೂರ್ಯನ ಕಿರಣ ಹಣೆಯ ಮೇಲೆ ಬರುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಮಧ್ಯಾಹ್ನ 12ಕ್ಕೆ ಸರಿಯಾಗಿ ಸೂರ್ಯನ ಕಿರಣ ಬಾಲರಾಮನ ಹಣೆಗೆ ಮುತ್ತಿಕ್ಕಲಿದೆ. 75 ಮಿ.ಮೀ. ಗಾತ್ರದ ಈ ಸೂರ್ಯ ತಿಲಕ ಸುಮಾರು ನಾಲ್ಕು ನಿಮಿಷಗಳ ಕಾಲ ಇರಲಿದ್ದು, ನಂತರ ಸರಿಯಲಿದೆ.

‘ಈ ವಿಶೇಷ ಸಂದರ್ಭಕ್ಕಾಗಿ ವಿಜ್ಞಾನಿಗಳು ಸಾಕಷ್ಟು ಪರಿಶ್ರಮಪಟ್ಟಿದ್ದಾರೆ. ಇದಕ್ಕಾಗಿ ರಾಮಮಂದಿರದಲ್ಲಿ ಸಾಧನವೊಂದನ್ನು ಇಟ್ಟು, ಪರೀಕ್ಷಿಸಿದ್ದಾರೆ. ಇದರ ಆಧಾರದ ಮೇಲೆ ಈ ವರ್ಷ ಬಾಲರಾಮನಿಗೆ ಸೂರ್ಯಾಭಿಷೇಕ ಆಗುವ ವಿಶ್ವಾಸವಿದೆ’ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಚಂಪತ್‌ ರಾಯ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

‘ಸೂರ್ಯವಂಶಕ್ಕೆ ಸೇರಿದ ಭಗವಾನ್ ರಾಮನ ಹಣೆಗೆ ರಾಮನವಮಿಯಂದು ಸೂರ್ಯನ ಕಿರಣಗಳು ತಲುಪುವಂತೆ ಮಾಡುವ ವಾಸ್ತುಶಿಲ್ಪದ ವಿನ್ಯಾಸವು ದೇವಾಲಯದ ನಿರ್ಮಾಣ ಹಂತದಲ್ಲೇ ನಡೆದಿತ್ತು. ರೂರ್ಖಿಯಲ್ಲಿರುವ ಕೇಂದ್ರೀಯ ನಿರ್ಮಾಣ ಸಂಶೋಧನಾ ಸಂಸ್ಥೆಯ ಸಂಶೋಧನಾ ವಿಭಾಗವು, ‘ತಿಲಕ್ ಆಫ್ ಸೂರ್ಯ ರೇಸ್’ ಎಂಬ ಸಾಧವನ್ನು ಅಭಿವೃದ್ಧಿಪಡಿಸಿತು. ಕನ್ನಡಿ, ಮಸೂರ ಮತ್ತು ಹಿತ್ತಾಳೆಯನ್ನು ಬಳಸಿದ ಈ ಸಾಧನವನ್ನು ಅಭಿವೃದ್ಧಿಪಡಿಸಲಾಗಿದೆ. ಈ ಸಾಧನವು ರಾಮನವಮಿಯಂದು ಬಾಲರಾಮನ ಮೂರ್ತಿಯ ಮೇಲೆ ಸೂರ್ಯ ತಿಲಕವನ್ನು ಮೂಡಿಸುವಂತೆ ವಿನ್ಯಾಸಗೊಳಿಸಲಾಗಿದೆ’ ಎಂದು ಇಲ್ಲಿನ ಸಿಬ್ಬಂದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.