ADVERTISEMENT

ಬಂಧನ ವಾರಂಟ್‌: ಬಿಹಾರ ಕಾನೂನು ಸಚಿವರ ವಜಾಕ್ಕೆ ಬಿಜೆಪಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2022, 13:56 IST
Last Updated 17 ಆಗಸ್ಟ್ 2022, 13:56 IST

ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನೂತನ ಸಂಪುಟ ವಿಸ್ತರಣೆ ಬೆನ್ನಲ್ಲೇ ಆರ್‌ಜೆಡಿ ನಾಯಕ ಕಾರ್ತಿಕೇಯ ಸಿಂಗ್ ಅವರನ್ನು ಕಾನೂನು ಸಚಿವರನ್ನಾಗಿ ಸೇರ್ಪಡೆ ಮಾಡಿರುವುದರ ಕುರಿತು ರಾಜ್ಯದಲ್ಲಿ ಬುಧವಾರ ವಿವಾದ ಭುಗಿಲೆದ್ದಿದೆ.

‘ಅಪಹರಣ ಪ್ರಕರಣದಲ್ಲಿ ಸಿಂಗ್‌ ವಿರುದ್ಧ ಬಂಧನ ವಾರಂಟ್ ಬಾಕಿ ಇದೆ’ ಎಂದು ಬಿಜೆಪಿ ಆರೋಪಿಸಿದರೆ,‘ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ’ ಎಂದು ನಿತೀಶ್ ಕುಮಾರ್ ಮಾಧ್ಯಮದವರ ಪ‍್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.

ಸಿಂಗ್ ಅವರನ್ನು ತಕ್ಷಣ ವಜಾಗೊಳಿಸುವಂತೆ ಒತ್ತಾಯಿಸಿದ ಹಿರಿಯ ಬಿಜೆಪಿ ನಾಯಕ ಸುಶೀಲ್ ಮೋದಿ, ‘ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮುಂದೆ ಶರಣಾಗಬೇಕಾದವರು ರಾಜ್ಯ ಸಚಿವ ಸಂಪುಟಕ್ಕೆ ಹೇಗೆ ಸೇರ್ಪಡೆಯಾದರು.2014 ರ ಅಪಹರಣ ಪ್ರಕರಣದಲ್ಲಿಸಿಂಗ್ ಆರೋಪಿಯಾಗಿದ್ದು, ಮೊಕಾಮಾ ಮಾಜಿ ಶಾಸಕ ಅನಂತ್ ಸಿಂಗ್ ಸೇರಿದಂತೆ ಇತರ 16 ಮಂದಿ ಸೇರಿದ್ದಾರೆ’ ಎಂದು ಹೇಳಿದರು.

ADVERTISEMENT

ಬಿಜೆಪಿ ಮೂಲಗಳ ಪ್ರಕಾರ, ಕಾರ್ತಿಕೇಯ ಸಿಂಗ್ ಅವರು ಆ. 16 ರಂದು ದಾನಪುರ ನ್ಯಾಯಾಲಯಕ್ಕೆ ಶರಣಾಗಬೇಕಿತ್ತು. ಆದರೆ, ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ರಾಜಭವನಕ್ಕೆ ಹೊರಟರು.

ಬಿಜೆಪಿಯ ಆರೋಪಗಳನ್ನು ತಳ್ಳಿ ಹಾಕಿದ ಆರ್‌ಜೆಡಿ ಹಿರಿಯ ನಾಯಕರೊಬ್ಬರು, ಸಿಂಗ್ ಅವರಿಗೆ ನ್ಯಾಯಾಲಯ ಸೆ. 1 ರವರೆಗೆ ಮಧ್ಯಂತರ ರಕ್ಷಣೆ ನೀಡಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಸಂಪುಟ ವಿಸ್ತರಣೆ ನಂತರ ‘ಮಹಾಘಟಬಂಧನ್’ ಸರ್ಕಾರದ ಹಲವಾರು ಸಚಿವರು ಕ್ರಿಮಿನಲ್ ದಾಖಲೆ ಹೊಂದಿದ್ದಾರೆ ಎಂದು ಮೋದಿ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.