
ಹೈದರಾಬಾದ್: ತೆಲಂಗಾಣದ ಹನುಮಕೊಂಡ ಜಿಲ್ಲೆಯ ಶಾಯಂಪೇಟ ಮಂಡಲದ ಪತ್ತಿಪಾಕ ಗ್ರಾಮದಲ್ಲಿ ಸುಮಾರು 200 ಬೀದಿ ನಾಯಿಗಳು ಮೃತಪಟ್ಟಿದ್ದು, ಸಾಮೂಹಿಕ ಹತ್ಯೆಯ ಶಂಕೆ ವ್ಯಕ್ತವಾಗಿದೆ.
ಕಳೆದ ಒಂದು ತಿಂಗಳಿನಿಂದ, ರಾಜ್ಯದಾದ್ಯಂತ ಸುಮಾರು ಒಂದು ಸಾವಿರ ಬೀದಿ ನಾಯಿಗಳು ಮೃತಪಟ್ಟಿವೆ.
‘ಪತ್ತಿಪಾಕ ಗ್ರಾಮದಲ್ಲಿ ತಿಂಗಳ ಹಿಂದೆ 200 ಬೀದಿ ನಾಯಿಗಳನ್ನು ಕೊಲ್ಲಲಾಗಿದೆ ಎಂಬ ಮಾಹಿತಿ ಸಿಕ್ಕಿತು. ಸ್ಟ್ರೇ ಅನಿಮಲ್ ಫೌಂಡೇಷನ್ ಆಫ್ ಇಂಡಿಯಾದ (ಎಸ್‌ಎಎಫ್‌ಐ) ಸದಸ್ಯರೊಂದಿಗೆ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ್ದೆ. ಸಾಮೂಹಿಕ ಹತ್ಯೆ ಬಗ್ಗೆ ಗ್ರಾಮಸ್ಥರನ್ನು ವಿಚಾರಿಸಿದೆವು. ಸ್ಥಳೀಯ ಪಂಚಾಯಿತಿ ಕಾರ್ಯದರ್ಶಿಯ ಸೂಚನೆ ಮೇರೆಗೆ ನಾಯಿಗಳನ್ನು ಕೊಲ್ಲಲಾಗಿದೆ ಎಂದು ಕೆಲವರು ತಿಳಿಸಿದರು. ನಾಯಿಗಳ ಕಳೇಬರಗಳನ್ನು ನಿರ್ದಿಷ್ಟ ಸ್ಥಳದಲ್ಲಿ ಹೂಳಲಾಗಿದೆ’ ಎಂದು ಎಸ್‌ಎಎಫ್‌ಐನ ಎ. ಗೌತಮ್ ತಿಳಿಸಿದ್ದಾರೆ.
‘ಪಂಚಾಯಿತಿ ಕಾರ್ಯದರ್ಶಿ ಮತ್ತು ನಾಯಿಗಳ ಹತ್ಯೆ ಮಾಡಿದವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದೇವೆ’ ಎಂದಿದ್ದಾರೆ.