ಅಪಘಾತ
ಪ್ರಾತಿನಿಧಿಕ ಚಿತ್ರ
ಮುಂಬೈ: ರಾಜಕಾರಣಿಗಳು ಮತ್ತು ಪ್ರಭಾವಿಗಳ ಮಕ್ಕಳು ಮದ್ಯ ಸೇವಿಸಿ ವಾಹನ ಚಾಲನೆ ಮಾಡಿ ಅಪಘಾತ ಸಂಭವಿಸಿರುವ ಮತ್ತೊಂದು ಪ್ರಕರಣ ಮುಂಬೈನಲ್ಲಿ ಬೆಳಕಿಗೆ ಬಂದಿದೆ.
ಎನ್‌ಸಿಪಿ (ಶರದ್ ಪವಾರ್) ನಾಯಕ ಬಂಧು ಗಾಯಕವಾಡ್ ಪುತ್ರ ಸೌರಭ್ ಗಾಯಕವಾಡ್ ಅವರ ಕಾರು, ಕೋಳಿ ಸಾಗಿಸುತ್ತಿದ್ದ ಟೆಂಪೊ ಟ್ರಕ್‌ಗೆ ಮಂಗಳವಾರ ತಡರಾತ್ರಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ, ಟೆಂಪೊ ಚಾಲಕ ಮತ್ತು ಸಹಾಯಕ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪುಣೆಯ ಮಂಜಾರಿ ಮುಂಡವಾಡ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸೌರಭ್ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ್ದರು ಎನ್ನಲಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕಾರು ವೇಗವಾಗಿ ಬಂದು ಟೆಂಪೊಗೆ ಡಿಕ್ಕಿಯಾಗಿರುವುದು, ಡಿಕ್ಕಿಯ ರಭಸಕ್ಕೆ ಟೆಂಪೊದಲ್ಲಿದ್ದ ಕೋಳಿಗಳು ಕೆಳಗೆ ಬಿದ್ದಿರುವುದು ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇತ್ತೀಚಿನ ಪ್ರಕರಣಗಳು
ಜೂನ್ 7: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ನಾಯಕ ರಾಜೇಶ್ ಶಾ ಪುತ್ರ ಮಿಹಿರ್ ಶಾ ಚಾಲನೆ ಮಾಡುತ್ತಿದ್ದ ಕಾರು ಜೂನ್ 7ರಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿತ್ತು. ಅಪಘಾತದಿಂದಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಕಾರು ಚಾಲನೆ ಮಾಡುತ್ತಿದ್ದ ಮಿಹಿರ್, ಮದ್ಯದ ಅಮಲಿನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಜೂನ್ 17: ವೈಎಸ್‌ಆರ್‌ಸಿಪಿಯ ರಾಜ್ಯಸಭಾ ಸದಸ್ಯ ಹಾಗೂ ಉದ್ಯಮಿ ಬೀಡಾ ಮಸ್ತಾನ್ ರಾವ್ ಅವರ ಮಗಳು ಮಾಧುರಿ, ಐಷಾರಾಮಿ ಬಿಎಂಡಬ್ಲ್ಯು ಕಾರು ಚಲಾಯಿಸಿ ಯುವಕನೊಬ್ಬನ ಸಾವಿಗೆ ಕಾರಣರಾಗಿದ್ದರು. ಈ ಪ್ರಕರಣ ಚೆನ್ನೈನಲ್ಲಿ ವರದಿಯಾಗಿತ್ತು.
ಜೂನ್ 19: ಉದ್ಯಮಿಯೊಬ್ಬರ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕ ಚಾಲನೆ ಮಾಡುತ್ತಿದ್ದ ಐಷಾರಾಮಿ ಪೋಶೆ ಕಾರು, ಬೈಕ್‌ಗೆ ಡಿಕ್ಕಿಯಾಗಿತ್ತು. ಪುಣೆಯ ಕಲ್ಯಾಣಿನಗರ್‌ನಲ್ಲಿ ನಡೆದ ಸಂಭವಿಸಿದ ಅಪಘಾತದಿಂದಾಗಿ ಬೈಕ್‌ನಲ್ಲಿದ್ದ ಇಬ್ಬರು ಟೆಕ್ಕಿಗಳು ಮೃತಪಟ್ಟಿದ್ದರು. ಬಾಲಕ ಮದ್ಯ ಸೇವಿಸಿದ್ದ ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.