
ಉತ್ತರ ಪ್ರದೇಶದಲ್ಲಿ ಆಗ್ರಾದಲ್ಲಿ ಚೈತನ್ಯಾನಂದ ಸರಸ್ವತಿಯನ್ನು ದೆಹಲಿ ಪೊಲೀಸರು ಬಂಧಿಸಿದರು
–ಪಿಟಿಐ ಚಿತ್ರ
ನವದೆಹಲಿ/ ಆಗ್ರಾ: ಇಲ್ಲಿನ ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್‌ನ 17 ಮಂದಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಯಾಗಿರುವ, ಇದುವರೆಗೆ ತಲೆಮರೆಸಿಕೊಂಡಿದ್ದ ಸ್ವಯಂ ಘೋಷಿತ ದೇವಮಾನವ ಸ್ವಾಮಿ ಚೈತನ್ಯಾನಂದ ಸರಸ್ವತಿ ಅವರನ್ನು ಆಗ್ರಾದಲ್ಲಿ ಭಾನುವಾರ ಬಂಧಿಸಲಾಗಿದೆ.
‘ಪೊಲೀಸರ ತಂಡವು ಚೈತನ್ಯಾನಂದ (62) ಅವರು ಆಗ್ರಾದ ಹೋಟೆಲ್‌ನಲ್ಲಿ ತಂಗಿದ್ದನ್ನು ಪತ್ತೆಹಚ್ಚಿ ಬಂಧಿಸಿದೆ’ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಚೈತನ್ಯಾನಂದ ಅವರ ಬಂಧನಕ್ಕೆ ಹಲವು ತಂಡಗಳನ್ನು ರಚಿಸಲಾಗಿತ್ತು. ಖಚಿತ ಮಾಹಿತಿ ಆಧರಿಸಿ, ಆಗ್ರಾದ ತಾಜ್ ಗಂಜ್ ಪ್ರದೇಶದಲ್ಲಿರುವ ಹೋಟೆಲ್‌ವೊಂದರಲ್ಲಿ ಅವರು ತಂಗಿರುವುದು ಖಚಿತಪಟ್ಟ ಬಳಿಕ ಭಾನುವಾರ ಬೆಳಿಗ್ಗೆ 3:30ರ ವೇಳೆಗೆ ಬಂಧಿಸಲಾಗಿದೆ’ ಎಂದು ಹೇಳಿದ್ದಾರೆ.
ಚೈತನ್ಯಾನಂದ ವಿರುದ್ಧ ಆಗಸ್ಟ್ 4ರಂದು ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ, ಆಶ್ರಮದಿಂದ ಪರಾರಿಯಾಗಿದ್ದರು.
ಆಗ್ರಾದ ಹೋಟೆಲ್‌ನ ಸಿಬ್ಬಂದಿ ಪ್ರಕಾರ, ‘ಸೆಪ್ಟೆಂಬರ್ 27ರಂದು ಚೈತನ್ಯಾನಂದ ಅವರು ‘ಪಾರ್ಥ ಸಾರಥಿ’ ಹೆಸರಿನಲ್ಲಿ ಹೋಟೆಲ್‌ನಲ್ಲಿ ಕೊಠಡಿ ಪಡೆದುಕೊಂಡಿದ್ದರು. ಇಡೀ ರಾತ್ರಿ ಕೊಠಡಿಯಲ್ಲೇ ಉಳಿದಿದ್ದರು’ ಎಂದು ತಿಳಿಸಿದ್ದಾರೆ.
ಬಂಧನದ ಕುರಿತು ಯಾವುದೇ ಹೇಳಿಕೆ ನೀಡಲು ಆಗ್ರಾ ಪೊಲೀಸರು ನಿರಾಕರಿಸಿದರು.
ಇದಕ್ಕೂ ಮುನ್ನ, ಚೈತನ್ಯಾನಂದ ಅವರ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲಾಗಿದ್ದ ₹8 ಕೋಟಿ ಮೊತ್ತವನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದರು.
‘ನೈಋತ್ಯ ದೆಹಲಿಯಲ್ಲಿರುವ ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್‌ನ ಮಾಜಿ ಮುಖ್ಯಸ್ಥರಾಗಿದ್ದ ಸರಸ್ವತಿ ಅವರ ವಸತಿಗೃಹಕ್ಕೆ ಭೇಟಿ ನೀಡುವಂತೆ ವಿದ್ಯಾರ್ಥಿನಿಯರ ಮೇಲೆ ಒತ್ತಡ ಹೇರುತ್ತಿದ್ದರು. ಅಲ್ಲದೇ, ಅವರ ಚಲನವಲನಗಳ ಮೇಲೆ ಮೊಬೈಲ್‌ನ ಮೂಲಕವೇ ನಿಗಾ ಇಡುತ್ತಿದ್ದರು’ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
‘ಚೈತನ್ಯಾನಂದ ಅವರು ಬೇರೆ ಬೇರೆ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದು, ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ, ₹50 ಲಕ್ಷ ಹಣವನ್ನು ಪಡೆದುಕೊಂಡಿದ್ದರು. ಬ್ಯಾಂಕ್ ಖಾತೆ ತೆರೆಯುವ ಸಂದರ್ಭದಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿದ್ದರು’ ಎಂದು ವಿಚಾರಣೆಯ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶ್ವಸಂಸ್ಥೆ ಹಾಗೂ ಬ್ರಿಕ್ಸ್ ಸಂಘಟನೆಯ ಜೊತೆ ಸಂಪರ್ಕ ಹೊಂದಿರುವುದಾಗಿ ಮಾಡಿಟ್ಟುಕೊಂಡಿದ್ದ ನಕಲಿ ವಿಸಿಟಿಂಗ್ ಕಾರ್ಡ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚೈತನ್ಯಾನಂದ ಸರಸ್ವತಿ ಅವರು ತಮ್ಮ ವಿರುದ್ಧದ ವಂಚನೆ, ನಕಲು ಹಾಗೂ ಕ್ರಿಮಿನಲ್ ಪಿತೂರಿ ಆರೋಪಗಳ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ದೆಹಲಿ ನ್ಯಾಯಾಲಯ, ಆದೇಶವನ್ನು ಕಾಯ್ದಿರಿಸಿತ್ತು.
ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠಂ’ ಸಂಸ್ಥೆಯ ಆಸ್ತಿಯನ್ನು ಲಾಭಕ್ಕಾಗಿ ಖಾಸಗಿ ಕಂಪನಿಗಳಿಗೆ ಬಿಟ್ಟುಕೊಡುವ ಮೂಲಕ ಚೈತನ್ಯಾನಂದ ಅವರು ಸಂಸ್ಥೆಯ ಮೇಲೆ ತಮ್ಮ ನಿಯಂತ್ರಣ ಸಾಧಿಸುತ್ತಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಈ ರೀತಿ ಬಂದ ಹಣವನ್ನು ಅವರು ಐಷಾರಾಮಿ ವಾಹನಗಳನ್ನು ಖರೀದಿಸಲು ಬಳಸಿದ್ದಾರೆ’ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.