@narendramodi
ಬೆಂಗಳೂರು: ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ಇಂದು (ಭಾನುವಾರ) ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು. 'ವಿವೇಕಾನಂದರು ಭಾರತದ ಆಧ್ಯಾತ್ಮಿಕತೆಯ ಸಂದೇಶವನ್ನು ಪಾಶ್ಚಿಮಾತ್ಯ ದೇಶಗಳಲ್ಲಿಯೂ ಪಸರಿಸಿದರು. ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಿಲು ಕರೆ ನೀಡಿ, ಯುವಕರನ್ನು ಪ್ರೇರೆಪಿಸಿದವರು' ಎಂದು ತಿಳಿಸಿದ್ದಾರೆ.
|
'ಸ್ವಾಮಿ ವಿವೇಕಾನಂದರ ಜಯಂತಿಯ ನಮನಗಳು. ಯುವ ಮನಸ್ಸುಗಳಲ್ಲಿ ಉತ್ಸಾಹ ಮತ್ತು ಗುರಿ ಸಾಧನೆಗೆ ಸದಾ ಸ್ಫೂರ್ತಿದಾಯಕರಾದವರು. ಅವರ ಆಶಯದಂತೆ ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣಕ್ಕೆ ನಾವು ಶ್ರಮಿಸಬೇಕಿದೆ, ಅವರ ತತ್ವಾದರ್ಶಗಳಿಗೆ ನಾವು ಬದ್ಧರಾಗಿದ್ದೇವೆ'ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
'ಭಾರತೀಯ ನಾಗರಿಕತೆ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯನ್ನು ಜಾಗತಿಕ ಮಟ್ಟದಲ್ಲಿ ಸ್ಥಾಪಿಸಿದ ಮಹಾನ್ ಚಿಂತಕ, ಲಕ್ಷಾಂತರ ಯುವಕರಿಗೆ ಸ್ಫೂರ್ತಿಯ ಚಿಲುಮೆ. 1893ರಲ್ಲಿ ಅಮೆರಿಕದ ಷಿಕಾಗೊ ವಿಶ್ವ ಧರ್ಮ ಸಮ್ಮೇಳನದಲ್ಲಿ ಅವರ ಮಾಡಿದ ಉಪನ್ಯಾಸ ಐತಿಹಾಸಿಕವಾದದ್ದು 'ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 'ಎಕ್ಸ್'ನಲ್ಲಿ ಬರೆದುಕೊಂಡಿದ್ದಾರೆ.
'ಶತಮಾನಗಳಿಂದ ಆಚರಣೆಯಲ್ಲಿದ್ದ ಅಸಮಾನತೆ, ಮೌಢ್ಯ, ಕಂದಾಚಾರಗಳನ್ನು ತೊಡೆದು ಧಾರ್ಮಿಕ ಹಾಗೂ ಸಾಮಾಜಿಕ ಸುಧಾರಣೆಗಾಗಿ ಶ್ರಮಿಸಿದ ಮಹಾನ್ ಸಂತ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬದ ದಿನ ಗೌರವದಿಂದ ನೆನೆಯೋಣ. ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸದ ಮೂಲಕ ದೈಹಿಕ ಸವಾಲುಗಳನ್ನು ಮೆಟ್ಟಿನಿಂತು ಕಿರಿಯೇ ವಯಸ್ಸಿನಲ್ಲಿ ವಿಶ್ವ ತಲೆಬಾಗುವಂತಹ ಆಧ್ಯಾತ್ಮಿಕ ಗುರುವಾಗಿ ಬೆಳೆದ ಸ್ವಾಮಿ ವಿವೇಕಾನಂದರ ಬದುಕು ಮತ್ತು ಬರಹ ಯುವ ಸಮುದಾಯಕ್ಕೆ ಸದಾ ಸ್ಪೂರ್ತಿ. ನಾಡಿನ ಸಮಸ್ತ ಯುವ ಸಮುದಾಯಕ್ಕೆ ರಾಷ್ಟ್ರೀಯ ಯುವದಿನದ ಶುಭಾಶಯಗಳು. ವಿವೇಕಾನಂದರನ್ನು ಆರಾಧನೆಗಷ್ಟೇ ಸೀಮಿತವಾಗಿಸದೆ ಅವರ ವಿಚಾರಗಳನ್ನು ಎಲ್ಲರೂ ಅಳವಡಿಸಿಕೊಳ್ಳುವ ಸಂಕಲ್ಪ ಮಾಡೋಣ, ಆ ಮೂಲಕ ದಿವ್ಯ ಚೇತನವನ್ನು ಗೌರವಿಸೋಣ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ 'ಎಕ್ಸ್' ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
'ಪ್ರಖರ ಚಿಂತನೆ, ಮಾತುಗಳಿಂದ ವಿಶ್ವವನ್ನೇ ಬೆರಗುಗೊಳಿಸಿದ ಸಂತ, ಆಧ್ಯಾತ್ಮಿಕ ಶಕ್ತಿಯ ಮಹತ್ವವನ್ನು ಜಗತ್ತಿಗೆ ಪಸರಿಸಿದ ಮಹಾತ್ಮ, ಸ್ವಾಮಿ ವಿವೇಕಾನಂದರು. ಇವರ ಜನ್ಮದಿನವನ್ನು ರಾಷ್ಟ್ರೀಯ 'ಯುವ ದಿನ'ವನ್ನಾಗಿ ಆಚರಿಸಲಾಗುತ್ತದೆ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
'ನಿಮ್ಮನ್ನು ನೀವು ಜಯಿಸಿ, ಇಡೀ ಜಗತ್ತೇ ನಿಮ್ಮದಾಗುತ್ತದೆ. ಏಳಿ.. ಎದ್ದೇಳಿ.. ಗುರಿ ಮುಟ್ಟುವ ತನಕ ಇಂಥ ಪ್ರಖರ ಸಂದೇಶಗಳಿಂದ ಮನುಕುಲವನ್ನು ಜ್ಞಾನದಿಂದ ಸುಜ್ಞಾನದೆಡೆಗೆ ಮುನ್ನಡೆಸಿದ ಮಹಾನ್ ಚೇತನ, ವೀರ ಸಂನ್ಯಾಸಿ ಶ್ರೀ ಸ್ವಾಮಿ ವಿವೇಕಾನಂದರಿಗೆ ನನ್ನ ಶ್ರದ್ಧಾಪೂರ್ವ ಪ್ರಣಾಮಗಳು' ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ‘ಎಕ್ಸ್ ನಲ್ಲಿ ತಿಳಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.