ADVERTISEMENT

2021–22ನೇ ಸಾಲಿನಲ್ಲಿ ತಾಜ್‌ಮಹಲ್‌ಗೆ 30 ಲಕ್ಷ ಪ್ರವಾಸಿಗರ ಭೇಟಿ

ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದ ತಾಣಗಳಲ್ಲಿ ಮಹಾಬಲಿಪುರಂಗೆ ಮೊದಲ ಸ್ಥಾನ

ಪಿಟಿಐ
Published 28 ಸೆಪ್ಟೆಂಬರ್ 2022, 12:55 IST
Last Updated 28 ಸೆಪ್ಟೆಂಬರ್ 2022, 12:55 IST
ತಾಜ್‌ಮಹಲ್
ತಾಜ್‌ಮಹಲ್   

ನವದೆಹಲಿ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಒಳಪಟ್ಟ ಸ್ಮಾರಕಗಳ ಪೈಕಿ ತಾಜ್‌ಮಹಲ್‌, ಕೆಂಪು ಕೋಟೆ ಮತ್ತು ಕುತುಬ್ ಮಿನಾರ್‌ ಗಳು 2021–22ನೇ ಸಾಲಿನಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆದಿರುವುದುಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಬಿಡುಗಡೆ ಮಾಡಿರುವ ಹೊಸ ವರದಿಯಿಂದ ತಿಳಿದುಬಂದಿದೆ.

ತಮಿಳುನಾಡಿನ ಮಹಾಬಲಿಪುರಂ ಅತಿ ಹೆಚ್ಚಿನ ಸಂಖ್ಯೆಯ ವಿದೇಶಿ ಪ್ರವಾಸಿಗರನ್ನು ಸೆಳೆದಿರುವುದನ್ನು ವರದಿ ತಿಳಿಸಿದೆ.

ತಾಜ್‌ಮಹಲ್‌ಗೆ 30.29 ಲಕ್ಷ, ಕೆಂಪು ಕೋಟೆಗೆ 10.32 ಲಕ್ಷ ಹಾಗೂ ಕುತುಬ್ ಮಿನಾರ್‌ಗೆ 10.15 ಲಕ್ಷ ದೇಶೀಯ ಪ್ರವಾಸಿಗರು ಭೇಟಿ ನೀಡಿದ್ದಾರೆ. ಮಹಾಬಲಿಪುರಂಗೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರ ಸಂಖ್ಯೆ 1.40 ಲಕ್ಷ ಎಂದು ವರದಿ ಹೇಳಿದೆ.

ADVERTISEMENT

ಕೋವಿಡ್‌–19 ನಿರ್ಬಂಧದ ಕಾರಣದಿಂದಾಗಿ ಭಾರತದಲ್ಲಿ 2021ರಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿತ್ತು. 2020ರಲ್ಲಿ 20ಲಕ್ಷಕ್ಕೂ ಹೆಚ್ಚಿನ ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದರೆ, 2021ರಲ್ಲಿ ಈ ಸಂಖ್ಯೆ 10.5 ಲಕ್ಷವಿತ್ತು ಎಂದು ವರದಿ ಮಾಹಿತಿ ನೀಡಿದೆ.

ಇಲ್ಲಿನ ವಿಜ್ಞಾನ ಭವನದಲ್ಲಿಮಂಗಳವಾರ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿ ಜಗದೀಪ್ ಧನಂಕರ್ ಅವರು‘ಭಾರತ ಪ್ರವಾಸೋದ್ಯಮದ ಅಂಕಿ–ಅಂಶ 2022’ ವರದಿಯನ್ನು ಬಿಡುಗಡೆ ಮಾಡಿದರು. ಇದೇ ವೇಳೆಅವರು 2018-19ನೇ ಸಾಲಿನ ರಾಷ್ಟ್ರೀಯ ಪ್ರವಾಸೋದ್ಯಮ ಪ್ರಶಸ್ತಿಗಳನ್ನೂ ಪ್ರದಾನ ಮಾಡಿದರು.

‘ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ಅವಧಿಯು ಬಹಳ ಕಠಿಣವಾಗಿತ್ತು. ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಇದು ಹೆಚ್ಚು ಪರಿಣಾಮ ಬೀರಿದೆ. ಆದರೆ, ಭಾರತವು ಇದನ್ನು ಎದುರಿಸಿ, ಕಠಿಣ ಅವಧಿಯಿಂದ ಹೊರಬಂದಿದೆ’ ಎಂದು ಧನಕರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.