ನವದೆಹಲಿ: ಪ್ರತಿಭಟನಾನಿರತ ರೈತರ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದು ಉತ್ತಮವಾಗಿತ್ತು ಮತ್ತು ನಾಲ್ಕನೇ ಸುತ್ತಿನ ಮಾತುಕತೆ ಡಿಸೆಂಬರ್ 3 ರಂದು ನಡೆಯಲಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಂಗಳವಾರ ಹೇಳಿದರು.
ಮಂಗಳವಾರ ನಡೆದ ಮಾತುಕತೆಯ ನಂತರ ಸಚಿವರು ಮಾಧ್ಯಮಗಳೊಂದಿಗೆ ಮಾತನಾಡಿ, ಸಭೆ ಉತ್ತಮವಾಗಿತ್ತು ಮತ್ತು ಡಿಸೆಂಬರ್ 3 ರಂದು ಮತ್ತೆ ಮಾತುಕತೆ ನಡೆಸಲು ನಾವು ನಿರ್ಧರಿಸಿದ್ದೇವೆ. ನಾವು ಒಂದು ಸಣ್ಣ ಗುಂಪನ್ನು ರಚಿಸಬೇಕೆಂದು ಬಯಸಿದ್ದೆವು ಆದರೆ ರೈತರ ಮುಖಂಡರು ಎಲ್ಲರೊಂದಿಗೆ ಮಾತುಕತೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ, ನಮಗೆ ಇದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಹೊಸ ಕೃಷಿ ಕಾನೂನುಗಳ ಬಗ್ಗೆ ಚರ್ಚಿಸಲು ಕೃಷಿ ತಜ್ಞರಲ್ಲದೆ ಸರ್ಕಾರದ ಪ್ರತಿನಿಧಿಗಳನ್ನು ಒಳಗೊಂಡಂತೆ ಸರ್ಕಾರವು ರೈತ ಮುಖಂಡರಿಗೆ ತಮ್ಮ ಸಂಘಟನೆಗಳಿಂದ ನಾಲ್ಕರಿಂದ ಐದು ಜನರ ಹೆಸರನ್ನು ನೀಡುವಂತೆ ಮತ್ತು ಸಮಿತಿಯನ್ನು ರಚಿಸುವಂತೆ ಕೇಳಿಕೊಂಡಿತ್ತು. ಸಭೆಯಲ್ಲಿ ರೈತ ನಾಯಕರಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮತ್ತು ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾಯ್ದೆಯ ಬಗ್ಗೆ ಸರ್ಕಾರ ವಿವರವಾದ ಮಾಹಿತಿಯನ್ನು ನೀಡಿತು.
ರೈತರು ತಮ್ಮ ಪ್ರತಿಭಟನೆಯನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡಿದ ಅವರು, 'ಪ್ರತಿಭಟನೆಯನ್ನು ನಿಲ್ಲಿಸಬೇಕು ಮತ್ತು ಮಾತುಕತೆಗೆ ಬರಬೇಕೆಂದು ರೈತರಲ್ಲಿ ನಾವು ಮನವಿ ಮಾಡುತ್ತೇವೆ. ಆದಾಗ್ಯೂ, ಈ ನಿರ್ಧಾರವು (ಪ್ರತಿಭಟನೆಯನ್ನು ಸ್ಥಗಿತಗೊಳಿಸುವ) ರೈತ ಸಂಘಟನೆಗಳು ಮತ್ತು ರೈತರ ಮೇಲೆ ಅವಲಂಬಿಸಿರುತ್ತದೆ' ಎಂದು ಹೇಳಿದರು.
ಕೇಂದ್ರ ಸರ್ಕಾರವು ನೂತನವಾಗಿ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ವಿರೋದಿಸಿರುವ ರೈತರು ಸಾವಿರಾರು ಸಂಖ್ಯೆಯಲ್ಲಿ ಸೇರಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಇಂದಿಗೆ ಆರನೇ ದಿನಕ್ಕೆ ಕಾಲಿಟ್ಟಿದ್ದು, ಮೂರು ಕೃಷಿ ಕಾನೂನನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.