ತಮಿಳುನಾಡು ಬಿಜೆಪಿ ಉಪಾಧ್ಯಕ್ಷೆಯಾಗಿ ನಟಿ ಖುಷ್ಬೂ ಸುಂದರ್ ನೇಮಕ
(ಚಿತ್ರ–@khushsundar)
ಚೆನ್ನೈ: ನಟಿ ಖುಷ್ಬೂ ಸುಂದರ್ ಅವರನ್ನು ತಮಿಳುನಾಡು ರಾಜ್ಯ ಬಿಜೆಪಿ ಉಪಾಧ್ಯಕ್ಷೆಯನ್ನಾಗಿ ಬುಧವಾರ ನೇಮಕ ಮಾಡಲಾಗಿದೆ.
ಮಾಜಿ ಸಂಸದರಾದ ವಿ.ಪಿ ದೊರೈಸಾಮಿ, ಕೆ.ಪಿ.ರಾಮಲಿಂಗಂ, ಶಶಿಕಲಾ ಪುಷ್ಪಾ ಮತ್ತು ಎಂ. ಚಕ್ರವರ್ತಿ ಸೇರಿದಂತೆ ಇತರರು ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿ ಮುಂದುವರಿದಿದ್ದಾರೆ. ಅವರ ನೇಮಕಾತಿಗಳನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅನುಮೋದಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನೈನಾರ್ ನಾಗೇಂದ್ರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಶವ ವಿನಾಯಕನ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ (ಸಂಘಟನೆ), ಪ್ರೊ.ರಾಮ ಶ್ರೀನಿವಾಸನ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಕರಾಟೆ ಆರ್.ತ್ಯಾಗರಾಜನ್ ರಾಜ್ಯ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ.
2025ರ ಏಪ್ರಿಲ್‌ನಲ್ಲಿ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ನೈನಾರ್ ನಾಗೇಂದ್ರನ್ ಅಧಿಕಾರ ವಹಿಸಿಕೊಂಡಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ನಟಿ ಖುಷ್ಬೂ ಸುಂದರ್, ನನಗೆ ನಿಜಕ್ಕೂ ತುಂಬಾ ಸಂತೋಷವಾಗಿದೆ. ನನ್ನ ಮೇಲೆ ನಂಬಿಕೆ ಇರಿಸಿ, ಈ ಹುದ್ದೆ ನೀಡಿದ್ದಕ್ಕಾಗಿ ನೈನಾರ್ ನಾಗೇಂದ್ರನ್, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.