ಎಂ.ಕೆ.ಸ್ಟಾಲಿನ್
–ಪಿಟಿಐ ಚಿತ್ರ
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಒಂದು ವರ್ಷ ಬಾಕಿ ಉಳಿದಿರುವಂತೆಯೇ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಸಚಿವ ಸಂಪುಟ ವಿಸ್ತರಿಸಲು ನಿರ್ಧರಿಸಿದ್ದಾರೆ.
ಹಣ ಅಕ್ರಮ ವರ್ಗಾವಣೆ ಪ್ರಕರಣ ಎದುರಿಸುತ್ತಿರುವ ವಿ.ಸೆಂಥಿಲ್ ಬಾಲಾಜಿ ಅವರು ರಾಜೀನಾಮೆ ನೀಡುವ ಸಾಧ್ಯತೆಯಿದ್ದು, ಮಹಿಳೆಯರು, ಶೈವ, ವೈಷ್ಣವರ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಅರಣ್ಯ ಸಚಿವ ಕೆ.ಪೊನ್ಮುಡಿ ಅವರನ್ನು ಸಹ ಸಂಪುಟದಿಂದ ಕೈಬಿಡುವ ನಿರೀಕ್ಷೆಯಿದೆ.
2024ರ ಸೆ.26ರಂದು ಹಣ ಅಕ್ರಮ ವರ್ಗಾವಣೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಾಗಿ 15 ತಿಂಗಳು ಜೈಲು ಅನುಭವಿಸಿರುವ ಬಾಲಾಜಿ ಅವರು ಸುಪ್ರೀಂಕೋರ್ಟ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದಾದ ಮೂರು ದಿನಗಳಲ್ಲಿ ಸಂಪುಟ ಪುನಾರಚನೆ ವೇಳೆ ಇಂಧನ ಹಾಗೂ ಅಬಕಾರಿ ಖಾತೆ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು.
ಇದಾದ ಬೆನ್ನಲ್ಲೇ, ಸಚಿವ ಸ್ಥಾನ ಅಥವಾ ಜಾಮೀನು ಆಯ್ಕೆ ಮಾಡಿಕೊಳ್ಳುವಂತೆ ಸುಪ್ರೀಂಕೋರ್ಟ್ ತಿಳಿಸಿತ್ತು. ಹೀಗಾಗಿ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎಂದು ಡಿಎಂಕೆ ಮೂಲಗಳು ತಿಳಿಸಿವೆ.
‘ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಅವರನ್ನು ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಗೆ ಪಕ್ಷದ ಜವಾಬ್ದಾರಿ ವಹಿಸುವ ಸಾಧ್ಯತೆಗಳಿವೆ. ರಾಜ್ಯದ ಪಶ್ಚಿಮ ಪ್ರಾಂತ್ಯವು ಡಿಎಂಕೆ ಪ್ರಬಲ ಸ್ಪರ್ಧೆ ಎದುರಿಸುತ್ತಿದ್ದು, ಈ ಭಾಗದಲ್ಲಿ ಪಕ್ಷ ಬಲವರ್ಧನೆಗೆ ಬಳಸಿಕೊಳ್ಳಲಿದ್ದಾರೆ’ ಎಂದು ಡಿಎಂಕೆ ನಾಯಕರೊಬ್ಬರು ನಿರ್ಧರಿಸಿದ್ದಾರೆ.
ಪೊನ್ಮುಡಿ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ ಬಳಿಕ ಡಿಎಂಕೆ ಹುದ್ದೆಯಿಂದ ವಜಾಗೊಳಿಸಿ, ಸಚಿವ ಸ್ಥಾನದಲ್ಲಿ ಮುಂದುವರಿಸಲಾಗಿತ್ತು. ಸಂಪುಟ ಪುನಾರಚನೆ ವೇಳೆ ಅವರನ್ನು ಕೈಬಿಡುವ ಸಾಧ್ಯತೆಯಿದೆ.
‘ಅವರಿಗೆ ಯಾವುದೇ ಆಯ್ಕೆಯಗಳು ಉಳಿದಿಲ್ಲ. ಜಾಮೀನು ಮುಂದುವರಿಯಬೇಕಾದರೆ, ಸೆಂಥಿಲ್ ಬಾಲಾಜಿ ರಾಜೀನಾಮೆ ನೀಡುವುದು ಅಗತ್ಯ. ಸಂಪುಟದಲ್ಲಿ ಮುಂದುವರಿಯುವುದು ಸರಿಯಲ್ಲ ಎಂದು ಕಾನೂನುತಜ್ಞರು ಕೂಡ ಅಭಿಪ್ರಾಯಪಟ್ಟಿದ್ದಾರೆ. ಸಚಿವ ಸ್ಥಾನದಲ್ಲಿ ಮುಂದುವರಿದರೆ, ಸುಪ್ರೀಂಕೋರ್ಟ್ ಗಂಭೀರವಾಗಿ ಪರಿಗಣಿಸುವ ಸಾಧ್ಯತೆಯಿದೆ’ ಎಂದು ಡಿಎಂಕೆ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ರಾಜ್ಯದ ಉತ್ತರ ಭಾಗದ ನಾಯಕರೊಬ್ಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದ್ದು, ಸಣ್ಣಮಟ್ಟದಲ್ಲಿ ಖಾತೆಗಳನ್ನು ಬದಲಾಯಿಸುವ ನಿರೀಕ್ಷೆಯಿದೆ’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.