ADVERTISEMENT

ನಿವಾರ್ ಚಂಡಮಾರುತ: ಪರಿಸ್ಥಿತಿ ಅವಲೋಕಿಸಿದ ತಮಿಳುನಾಡು ಸಿಎಂ ಪಳನಿಸ್ವಾಮಿ

ಏಜೆನ್ಸೀಸ್
Published 25 ನವೆಂಬರ್ 2020, 11:34 IST
Last Updated 25 ನವೆಂಬರ್ 2020, 11:34 IST
‘ನಿವಾರ್’ ಚಂಡಮಾರುತದ ಪರಿಣಾಮ ಮಾಮಲ್ಲಪುರಂ ಕರಾವಳಿಯಲ್ಲಿ ವೇಗವಾಗಿ ಗಾಳಿ ಬೀಸುತ್ತಿದೆ – ಪಿಟಿಐ ಚಿತ್ರ
‘ನಿವಾರ್’ ಚಂಡಮಾರುತದ ಪರಿಣಾಮ ಮಾಮಲ್ಲಪುರಂ ಕರಾವಳಿಯಲ್ಲಿ ವೇಗವಾಗಿ ಗಾಳಿ ಬೀಸುತ್ತಿದೆ – ಪಿಟಿಐ ಚಿತ್ರ   

ಚೆನ್ನೈ: ‘ನಿವಾರ್’ ಚಂಡಮಾರುತದ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರು ಬುಧವಾರ ಚೆಂಬರಂಬಕ್ಕಂ ಸರೋವರ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.

ಈ ಮಧ್ಯೆ, ಪರಿಹಾರ ಕೇಂದ್ರಗಳಲ್ಲಿ ಕೋವಿಡ್–19 ಮಾರ್ಗಸೂಚಿಗಳನ್ನು ಪಾಲಿಸಲು ಒತ್ತುನೀಡಲಾಗುವುದು ಎಂದು ತಮಿಳುನಾಡು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅತುಲ್ಯಾ ಮಿಶ್ರಾ ಹೇಳಿದ್ದಾರೆ.

‘ಪರಿಹಾರ ಕೇಂದ್ರಗಳಲ್ಲಿ ಮಾಸ್ಕ್‌ಗಳು, ಸ್ಯಾನಿಟೈಸರ್‌ಗಳು ಲಭ್ಯವಿವೆ. ಪ್ರತಿ ವ್ಯಕ್ತಿಗೆ 27 ವಸ್ತುಗಳಂತೆ ಅಗತ್ಯವಸ್ತುಗಳು ಸಿದ್ಧವಿವೆ. ಇದರಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಅಗತ್ಯವಸ್ತುಗಳ ಕಿಟ್‌ಗಳು ಸಹ ಇವೆ’ ಎಂದು ಅವರು ಹೇಳಿದ್ದಾರೆ.

‘ಈಶಾನ್ಯ ಮುಂಗಾರಿನ ಬಗ್ಗೆ ನಾವು ಯಾವಾಗಲೂ ಜಾಗರೂಕರಾಗಿರಬೇಕಾಗುತ್ತದೆ. ಮುಖ್ಯಮಂತ್ರಿಗಳು ಹಾಗೂ ಇತರ ಅಧಿಕಾರಿಗಳು ಸಭೆ ನಡೆಸಿದ್ದು, ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಅವರು ಹೇಳಿದ್ದಾರೆ.

ಚಂಡಮಾರುತದ ಸಂದರ್ಭದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯದಲ್ಲಿ ತಮಿಳುನಾಡು ಮತ್ತು ಪುದುಚೇರಿ ಸರ್ಕಾರದ ಜತೆ ಕೈಜೋಡಿಸಲು ಸೇನೆಯೂ ಸನ್ನದ್ಧವಾಗಿದೆ ಎಂದು ಸೇನೆಯ ದಕ್ಷಿಣ ಕಮಾಂಡ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.