ಅಣ್ಣಾ ವಿಶ್ವವಿದ್ಯಾಲಯ
(ಪಿಟಿಐ ಚಿತ್ರ)
ಚೆನ್ನೈ: ಅಣ್ಣಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯೊಬ್ಬರಿಗೆ ಲೈಂಗಿಕ ದೌರ್ಜನ್ಯ ನೀಡಿದ್ದ ಜ್ಞಾನಶೇಕರನ್‌ಗೆ ಮಹಿಳಾ ನ್ಯಾಯಾಲಯವು ಸೋಮವಾರ ಶಿಕ್ಷೆ ಪ್ರಕಟಿಸಿದೆ. ಕ್ಷಮಾದಾನ ಇಲ್ಲದೆ, 30 ವರ್ಷಗಳ ಜೀವಾವಧಿ ಶಿಕ್ಷೆಯನ್ನು ಕೋರ್ಟ್ ವಿಧಿಸಿದೆ.
ಮಹಿಳಾ ನ್ಯಾಯಾಲಯದ ನ್ಯಾಯಾಧೀಶರಾದ ಎಂ. ರಾಜಲಕ್ಷ್ಮಿ ಅವರು ಶಿಕ್ಷೆ ಪ್ರಕಟಿಸಿದರು.
ಜ್ಞಾನಶೇಕರನ್ ಮೇಲೆ ಒಟ್ಟು 11 ಆರೋಪಗಳನ್ನು ಹೊರಿಸಲಾಗಿತ್ತು. ದಾಖಲೆಗಳು ಮತ್ತು ವಿಧಿವಿಜ್ಞಾನ ಸಾಕ್ಷ್ಯಗಳ ಮೂಲಕ ಸರ್ಕಾರಿ ವಕೀಲರು ಈ ಎಲ್ಲ ಆರೋಪಗಳನ್ನು ಸಾಬೀತು ಮಾಡಿದ್ದಾರೆ. ಕುಟುಂಬದಲ್ಲಿ ತಾನೊಬ್ಬನೇ ದುಡಿಯುವ ವ್ಯಕ್ತಿ. ಆದ್ದರಿಂದ ಗರಿಷ್ಠ ಶಿಕ್ಷೆ ವಿಧಿಸಬಾರದು ಎಂದು ಅಪರಾಧಿ ನ್ಯಾಯಾಲಯಕ್ಕೆ ಕೋರಿದ್ದ.
2024ರ ಡಿಸೆಂಬರ್‌ನಲ್ಲಿ ಈ ಘಟನೆ ನಡೆದಿತ್ತು. ತಮಿಳುನಾಡಿನಲ್ಲಿ ಈ ಘಟನೆಯು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಅಪರಾಧಿಯು ಆಡಳಿತಾರೂಢ ಡಿಎಂಕೆ ಪಕ್ಷದ ಸಂಪರ್ಕ ಹೊಂದಿದ್ದಾನೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಇದಕ್ಕಾಗಿ ರಾಜಕೀಯ ಮೇಲಾಟವೂ ನಡೆದಿತ್ತು.
ಜ್ಞಾನಶೇಕರನ್ ಕುರಿತು ಇದೇ ಜನವರಿಯಲ್ಲಿ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ‘ಆತ ತಮ್ಮ ಪಕ್ಷದ ಬೆಂಬಲಿಗನಷ್ಟೆ. ಆತ ಪಕ್ಷದ ಸದಸ್ಯನಾಗಿರಲಿಲ್ಲ’ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.