ADVERTISEMENT

ಜಯಲಲಿತಾ ಆತ್ಮೀಯರು; ಈಗ ಪರಸ್ಪರರ ಸೋಲಿಗೆ ಪಣತೊಟ್ಟ ಬದ್ಧ ವೈರಿಗಳು

ಜಯಯಲಿತಾ ಅವರ ಆತ್ಮೀಯರೆನಿಸಿಕೊಂಡಿದ್ದವರು ಪರಸ್ಪರರ ಸೋಲಿಗೆ ಪಣತೊಟ್ಟಿದ್ದಾರೆ

ಇ.ಟಿ.ಬಿ ಶಿವಪ್ರಿಯನ್‌
Published 20 ಮಾರ್ಚ್ 2021, 2:35 IST
Last Updated 20 ಮಾರ್ಚ್ 2021, 2:35 IST
ತಂಗ ತಮಿಳ್‌ಸೆಲ್ವನ್‌
ತಂಗ ತಮಿಳ್‌ಸೆಲ್ವನ್‌   

ಚೆನ್ನೈ: ತಂಗ ತಮಿಳ್‌ಸೆಲ್ವನ್‌ ಹಾಗೂ ಒ. ಪನ್ನೀರಸೆಲ್ವಂ ಅವರು 2001ರಲ್ಲಿ ಜೊತೆಯಾಗಿಯೇ ತಮಿಳುನಾಡು ವಿಧಾನಸಭೆಯನ್ನು ಮೊದಲಬಾರಿಗೆ ಪ್ರವೇಶಿಸಿದ್ದರು. ಅತಿ ಶೀಘ್ರದಲ್ಲೇ ಅವರು, ಅಂದಿನ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.

ಆಂಡಿಪಟ್ಟಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ತಮಿಳ್‌ಸೆಲ್ವನ್‌ ಅವರು 2002ರಲ್ಲಿ ತಮ್ಮ ಕ್ಷೇತ್ರವನ್ನು ಜಯಲಲಿತಾ ಅವರಿಗಾಗಿ ಬಿಟ್ಟುಕೊಡಬೇಕಾಯಿತು. 2006ರಲ್ಲೂ ಜಯಲಲಿತಾ ಅವರು ಇದೇ ಕ್ಷೇತ್ರದಿಂದ ಆಯ್ಕೆಯಾದರು. ಈ ಎರಡೂ ಸಂದರ್ಭಗಳಲ್ಲಿ ತಮಿಳ್‌ಸೆಲ್ವನ್‌ ಅವರು ಜಯಲಲಿತಾ ಅವರ ಬಲಗೈಯಂತಿದ್ದರು. ಅದಕ್ಕೆ ಪ್ರತಿಫಲವಾಗಿ ರಾಜ್ಯಸಭೆಯ ಸದಸ್ಯತ್ವವನ್ನು ಸಹ ಪಡೆದಿದ್ದರು.

ಆ ನಂತರ ಸುಪ‍್ರೀಂ ಕೋರ್ಟ್‌ ತೀರ್ಪಿನಿಂದಾಗಿ ಜಯಲಲಿತಾ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಾಗ, ತಮ್ಮಿಂದ ತೆರವಾಗುವ ಸ್ಥಾನಕ್ಕೆ ಆಯ್ಕೆ ಮಾಡಿಕೊಂಡದ್ದು ಪನ್ನೀರ‌ಸೆಲ್ವಂ ಅವರನ್ನು. ತಮ್ಮ ಜೀವನದ ಕೊನೆಯ ಕ್ಷಣದವರೆಗೂ ಜಯಲಲಿತಾ ಅವರು ಈ ಇಬ್ಬರು ನಾಯಕರ ಮೇಲೆ ಅಪಾರ ವಿಶ್ವಾಸವನ್ನಿಟ್ಟಿದ್ದರು. ಆದರೆ, ಇವರಿಬ್ಬರೊಳಗೆ ಯಾವತ್ತೂ ಅಂಥ ಸ್ನೇಹ ಇರಲಿಲ್ಲ ಎಂಬುದು ವಾಸ್ತವ.

ADVERTISEMENT

ಜಯಲಲಿತಾ ಅವರ ಸಾವಿನ ನಂತರ ತಮಿಳುನಾಡು ರಾಜಕೀಯದಲ್ಲಿ ಭಾರಿ ಬದಲಾವಣೆಗಳಾಗಿವೆ. ತಮಿಳ್‌ಸೆಲ್ವನ್‌ ಅವರು ಎಐಎಡಿಎಂಕೆಯಿಂದ ದೂರವಾಗಿ ವಿರೋಧ ಪಕ್ಷ ಡಿಎಂಕೆ ತೆಕ್ಕೆಗೆ ಸೇರಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಎಐಎಡಿಎಂಕೆಗೆ ಬಲವಾದ ಪ್ರತಿರೋಧ ಒಡ್ಡುತ್ತಿದ್ದಾರೆ.

ಜಯಲಲಿತಾ ಸಾವಿನ ನಂತರ, 2016ರಲ್ಲಿ ಪನ್ನೀರಸೆಲ್ವಂ ಅವರು ಮುಖ್ಯಮಂತ್ರಿ ಹುದ್ದೆಗೆ ಏರುತ್ತಿದ್ದಂತೆಯೇ ಇವರಿಬ್ಬರ ನಡುವಿನ ದೀರ್ಘಕಾಲದ ರಾಜಕೀಯ ವೈಷಮ್ಯ ಬಹಿರಂಗವಾಯಿತು. ಪನ್ನೀರಸೆಲ್ವಂ ಅವರನ್ನು ಕೆಳಗಿಳಿಸಿ ಶಶಿಕಲಾ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಬೇಕು ಎಂದು ಒತ್ತಾಯಿಸಿದ ಮೊದಲಿಗರಲ್ಲಿ ತಮಿಳ್‌ಸೆಲ್ವನ್‌ ಒಬ್ಬರಾಗಿದ್ದರು.

ಪಕ್ಷದೊಳಗಿನ ಬಂಡಾಯ ಹಾಗೂ ಟಿ.ಟಿ.ವಿ. ದಿನಕರನ್‌ ಅವರಿಗೆ ನಿಷ್ಠೆ ಪ್ರದರ್ಶಿಸಿದ್ದರಿಂದ ತಮಿಳ್‌ಸೆಲ್ವನ್‌ ಅವರು 2017ರಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಂಡರು. 2019ರಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಥೇಣಿ ಕ್ಷೇತ್ರದಿಂ ಸ್ಪರ್ಧಿಸಿ ಸೋಲು ಅನುಭವಿಸಿದರು. ಅದಾದ ನಂತರ ಅವರು ಡಿಎಂಕೆ ಸೇರಿದರು.

‘ಮುಖ್ಯಮಂತ್ರಿಯಾಗಲಿ, ಉಪಮುಖ್ಯಮಂತ್ರಿಯಾಗಲಿ ಎಲ್ಲಿದ್ದಾರೆ? ಮತದಾರರು ತನ್ನ ಮೇಲೆ ಇಟ್ಟಿದ್ದ ವಿಶ್ವಾಸವನ್ನು ಕಾಯ್ದುಕೊಳ್ಳಲು ಆಗದಿದ್ದವರು ಮತ್ತೆ ಜನರ ಪ್ರೀತಿಯನ್ನು ಗಳಿಸಲು ಸಾಧ್ಯವಾಗುವುದಿಲ್ಲ. ಬೋದಿನಾಯಕನೂರಿನ ಜನರಿಗಾಗಿ ಪನ್ನೀರಸೆಲ್ವಂ ಅವರು ಏನನ್ನೂ ಮಾಡಿಲ್ಲ’ ಎಂದು ತಮಿಳ್‌ಸೆಲ್ವನ್‌ ‘ಪ್ರಜಾವಾಣಿ’ ಜತೆ ಮಾತನಾಡುತ್ತಾ ಹೇಳಿದ್ದಾರೆ. ತಮಿಳ್‌ಸೆಲ್ವನ್‌ ಅವರು ವಿ.ಕೆ. ಶಶಿಕಲಾ ಅವರ ಆಪ್ತ ಬಳಗದಲ್ಲೂ ಗುರುತಿಸಿಕೊಂಡಿದ್ದಾರೆ.

ಥೇಣಿ ಜಿಲ್ಲೆ ಹಾಗೂ ಪಾರಂಪರಿಕವಾಗಿ ಎಐಎಡಿಎಂಕೆಯ ಭದ್ರಕೋಟೆಯಾಗಿದ್ದ ಆಂಡಿಪಟ್ಟಿ ಕ್ಷೇತ್ರದಲ್ಲಿ ತಮಿಳ್‌ಸೆಲ್ವನ್‌ ಅವರು ತುಂಬ ಜನಪ್ರಿಯ ನಾಯಕ. ಬೇರುಮಟ್ಟದ ಕಾರ್ಯಕರ್ತರ ಜತೆ ನಿರಂತರ ಸಂಪರ್ಕ ಹೊಂದಿರುವ ಅವರು, ಒಳ್ಳೆಯ ಸಂಘಟಕರೂ ಆಗಿದ್ದಾರೆ. ಥೇಣಿ ಜಿಲ್ಲೆಯಲ್ಲಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ದೀರ್ಘಕಾಲದಿಂದ ಯೋಜನೆ ರೂಪಿಸುತ್ತಿರುವ ಡಿಎಂಕೆ, ಅದರ ಜವಾಬ್ದಾರಿಯನ್ನು ಈಗ ತಮಿಳ್‌ಸೆಲ್ವನ್‌ ಅವರಿಗೆ ನೀಡಿದೆ. ಬೋದಿನಾಯಕನೂರು ಕ್ಷೇತ್ರದ ಅಭ್ಯರ್ಥಿಯಾಗಿರುವ ಪನ್ನೀರಸೆಲ್ವಂ ಅವರನ್ನು ಸೋಲಿಸಬೇಕೆಂಬ ಉದ್ದೇಶದಿಂದ 2020ರ ಅಕ್ಟೋಬರ್‌ ತಿಂಗಳಲ್ಲಿಯೇ ಡಿಎಂಕೆಯು ಈ ಜಿಲ್ಲೆಯಲ್ಲಿ ಪಕ್ಷದ ಉಸ್ತುವಾರಿಯನ್ನು ತಮಿಳ್‌ಸೆಲ್ವನ್‌ ಅವರ ಹೆಗಲಿಗೇರಿಸಿದೆ.

* ಬೋದಿನಾಯಕನೂರು ಕ್ಷೇತ್ರದಲ್ಲಿ ಎಐಎಡಿಎಂಕೆ ಅಭ್ಯರ್ಥಿಯನ್ನು ಸೋಲಿಸಲು ಬೇಕಾದಷ್ಟು ಕೆಲಸಗಳನ್ನು ನಾವು ಮಾಡಿದ್ದೇವೆ. ಮೇ 2ರ ನಂತರ ಈ ಕ್ಷೇತ್ರವು ಡಿಎಂಕೆಯ ತೆಕ್ಕೆಗೆ ಬರಲಿದೆ

-ತಮಿಳ್‌ಸೆಲ್ವನ್‌, ಡಿಎಂಕೆ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.