ADVERTISEMENT

ಕೊರೊನಾ ಚಿತ್ರಣ | ಆತುರ ತೋರಿ ಎಡವಿದ ತಮಿಳುನಾಡು

​ಪ್ರಜಾವಾಣಿ ವಾರ್ತೆ
Published 15 ಮೇ 2020, 5:09 IST
Last Updated 15 ಮೇ 2020, 5:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದೇಶದಲ್ಲಿ ಅತಿಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗಿರುವ ರಾಜ್ಯಗಳ ಸಾಲಿನಲ್ಲಿ ತಮಿಳುನಾಡು ಮೂರನೇ ಸ್ಥಾನದಲ್ಲಿದೆ. ತಮಿಳುನಾಡಿನಲ್ಲಿಮೇ 15ರ ಬೆಳಿಗ್ಗೆ 10.35ರ ಹೊತ್ತಿಗೆ9227 ಪ್ರಕರಣಗಳು ದಾಖಲಾಗಿವೆ. ಕೋವಿಡ್ ಹರಡುವಿಕೆ ನಿಯಂತ್ರಿಸುವಲ್ಲಿ ತೋರಿದ ನಿರ್ಲಕ್ಷ್ಯ ಮತ್ತು ಸೋಂಕಿನಿಂದ ಗುಣಮುಖರಾದವರನ್ನು ಮನೆಗೆ ಕಳುಹಿಸುವಲ್ಲಿ ರಾಜ್ಯ ಸರ್ಕಾರ ತೋರಿದ ಆತುರವೇ ಪರಿಸ್ಥಿತಿ ಬಿಗಡಾಯಿಸಲು ಪ್ರಮುಖ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ದೇಶದ ಎಲ್ಲಾ ರಾಜ್ಯಗಳಲ್ಲಿ ಸೋಂಕು ಹರಡಿದ್ದಾಗ ತಮಿಳುನಾಡಿನಲ್ಲಿ ಬೆರಳೆಣಿಕೆಯಷ್ಟು ಪ್ರಕರಣಗಳಷ್ಟೇ ಇದ್ದವು. ಬೇರೆಲ್ಲಾ ರಾಜ್ಯಗಳಲ್ಲಿ ಸೋಂಕು ವ್ಯಾಪಕವಾಗಿ ಹರಡಿದ್ದರೆ, ತಮಿಳುನಾಡಿನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲೇ ಇತ್ತು. ಆದರೂ, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿರಸ್ತೆಗಳನ್ನು ರಾಜ್ಯ ಸರ್ಕಾರ ಬಂದ್ ಮಾಡಿಸಿತ್ತು. ಸೋಂಕಿನ ಸಂಖ್ಯೆ ಎರಡಂಕಿಯೂ ದಾಟದ ಕಾರಣ ರಾಜ್ಯ ಸುರಕ್ಷಿತವಾಗಿದೆ ಎಂದು ರಾಜ್ಯ ಸರ್ಕಾರ ಹೇಳಿತ್ತು. ಬೇರೆ ರಾಜ್ಯಗಳೂ ಹೀಗೆ ಭಾವಿಸಿದ್ದವು. ಆದರೆ, ದೆಹಲಿಯಲ್ಲಿ ನಡೆದಿದ್ದ ತಬ್ಲೀಗ್‌ ಜಮಾತ್‌ನಲ್ಲಿ ಭಾಗವಹಿಸಿದ್ದವರಲ್ಲಿ ರಾಜ್ಯದ 1,400 ಜನರಿದ್ದರು ಎಂಬ ಮಾಹಿತಿ ಸಿಡಿಲಿನಿಂತೆ ಎರಗಿತು.

ಅಲ್ಲಿಯವರೆಗೆ ರಾಜ್ಯದಲ್ಲಿ ಪ್ರತಿದಿನ ಕೆಲವೇ ನೂರು ತಪಾಸಣೆಗಳನ್ನು ನಡೆಸಲಾಗುತ್ತಿತ್ತು. ರಾಜ್ಯದಲ್ಲಿ ಕಡಿಮೆ ಪ್ರಕರಣಗಳು ಪತ್ತೆಯಾಗಿದ್ದು, ಕಡಿಮೆ ಸಂಖ್ಯೆಯ ತಪಾಸಣೆ ನಡೆಸಿದ್ದರಿಂದ ಎಂಬುದು ಬಹಿರಂಗವಾಯಿತು. ನಂತರ, ಸರ್ಕಾರ ತಪಾಸಣೆಗಳ ಸಂಖ್ಯೆಯನ್ನು ಹೆಚ್ಚಿಸಿತು. ತಬ್ಲೀಗ್‌ ಜಮಾತ್‌ನಲ್ಲಿ ಭಾಗವಹಿಸಿದ್ದವರನ್ನು ಪತ್ತೆ ಮಾಡಿ, ಅವರ ಸಂಪರ್ಕಕ್ಕೆ ಬಂದಿದ್ದವರನ್ನೂ ತಪಾಸಣೆ ಮಾಡಲಾಯಿತು. ಸೋಂಕಿನ ಸಂಖ್ಯೆ ವ್ಯಾಪಕವಾಗಿ ಏರಿಕೆಯಾಯಿತು. ಇದೇ ವೇಳೆ ಸಾವಿರಾರು ಜನರನ್ನು ಕ್ವಾರಂಟೈನ್ ಮಾಡಲಾಯಿತು. ಏಪ್ರಿಲ್20ರವೇಳೆಗೆ ರಾಜ್ಯದಲ್ಲಿ 1,800ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದವು. ಇದೇ ವೇಳೆ 950ಕ್ಕೂ ಹೆಚ್ಚು ಜನರು ಗುಣಮುಖರಾಗಿದ್ದಾರೆ ಎಂದು ಅವರನ್ನು ಮನೆಗೆ ಕಳುಹಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿತು. ಸೋಂಕು ಪತ್ತೆಯಾಗಿ 14 ದಿನ ಪೂರ್ಣವಾಗುವ ಮೊದಲೇ ನೂರಾರು ಜನರನ್ನು ಮನೆಗೆ ಕಳುಹಿಸಲಾಗಿತ್ತು. ಪ್ರತಿದಿನ 50–60 ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದರೆ, 80–100 ಜನರನ್ನು ಮನೆಗೆ ಕಳುಹಿಸಲಾಗುತ್ತಿತ್ತು. ಸೋಂಕನ್ನು ನಾವು ನಿಯಂತ್ರಿಸಿದ್ದೇವೆ ಎಂದು ರಾಜ್ಯ ಸರ್ಕಾರ ಘೋಷಿಸಿತು. ಆದರೆ ಈ ನಡೆಯನ್ನು ತಜ್ಞರು ಟೀಕಿಸಿದ್ದರು.

ADVERTISEMENT

ಏಪ್ರಿಲ್ 30ರ ವೇಳೆಗೆ ಸೋಂಕಿನ ಸಂಖ್ಯೆ ಇನ್ನೂ 500 ಹೆಚ್ಚಾಯಿತು. ಎಲ್ಲೋ ಎಚ್ಚರ ತಪ್ಪಿರುವ ಸೂಚನೆ ದೊರೆತ ಕಾರಣ ರಾಜ್ಯ ಸರ್ಕಾರ, ತಪಾಸಣೆಗಳ ಸಂಖ್ಯೆಯನ್ನು ವ್ಯಾಪಕವಾಗಿ ಏರಿಕೆ ಮಾಡಿತು. ಸೋಂಕಿನ ಸಂಖ್ಯೆ ಏರುತ್ತಲೇ ಹೋಯಿತು. ಐದು ದಿನದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಯಿತು. ನಂತರದ ಆರು ದಿನಗಳಲ್ಲಿ (ಮೇ 12) ಸೋಂಕಿನ ಸಂಖ್ಯೆ ಮತ್ತೆ ದುಪ್ಪಟ್ಟಾಯಿತು. ನಂತರದ ಎರಡು ದಿನಗಳಲ್ಲಿ ಇನ್ನೂ 1,300ಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗಿವೆ. ಈಗ ದೇಶದಲ್ಲಿ ಅತಿಹೆಚ್ಚು ತಪಾಸಣೆ ನಡೆಸಿರುವ ರಾಜ್ಯಗಳ ಪಟ್ಟಿಯಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ ಸೋಂಕು ನಿಯಂತ್ರಣ ಸರ್ಕಾರದ ಕೈತಪ್ಪಿರುವುದು ಸಾಬೀತಾಗಿದೆ.

5,262 ಚೆನ್ನೈನಲ್ಲಿ ಪತ್ತೆಯಾದ ಪ್ರಕರಣಗಳು

3,304 ಚೆನ್ನೈನ ಕೋಯಂಬೀಡು ತರಕಾರಿ ಮಾರುಕಟ್ಟೆಯಲ್ಲಿ ಪತ್ತೆಯಾಗಿರುವ ಪ್ರಕರಣಗಳು. ಆರಂಭದಲ್ಲಿ ಈ ಮಾರುಕಟ್ಟೆಯನ್ನು ಕಡೆಗಣಿಸಲಾಗಿತ್ತು. ಈಗ ಮಾರುಕಟ್ಟೆಯ ಸಂಪರ್ಕದಲ್ಲಿ ಇದ್ದವರ ಮನೆ ಇರುವ ವಸತಿ ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.