
ನವದೆಹಲಿ: ದ್ವಿಭಾಷಾ ನೀತಿ ಅನುಸರಿಸಲಾಗುತ್ತಿದೆ ಎಂಬ ಕಾರಣ ನೀಡುತ್ತಿದ್ದ ತಮಿಳುನಾಡು, ರಾಜ್ಯದಲ್ಲಿ ಜವಾಹರ ನವೋದಯ ವಿದ್ಯಾಲಯಗಳನ್ನು ಸ್ಥಾಪಿಸಿರಲಿಲ್ಲ. ಇಂತಹ ಕ್ರಮ ಕೈಗೊಂಡ ದೇಶದ ಏಕೈಕ ರಾಜ್ಯವೂ ಆಗಿತ್ತು. ಆದರೆ, ಇತ್ತೀಚೆಗೆ ಸುಪ್ರೀಂ ಕೋರ್ಟ್ ಈ ಕುರಿತು ನೀಡಿರುವ ತೀರ್ಪಿನಿಂದಾಗಿ ತಮಿಳುನಾಡು ಸರ್ಕಾರ ಈಗ ರಾಜ್ಯದಲ್ಲಿ ಈ ಶಾಲೆಗಳನ್ನು ಸ್ಥಾಪಿಸಲೇಬೇಕಾಗಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದಿರುವ ಶಿಕ್ಷಣ ಸಚಿವಾಲಯವು, ನವೋದಯ ಶಾಲೆಗಳನ್ನು ಸ್ಥಾಪಿಸಲು ಅಗತ್ಯವಿರುವ ಮೂಲಸೌಕರ್ಯಗಳ ಕುರಿತು ಚರ್ಚಿಸಲು ಶೀಘ್ರವೇ ಸಭೆ ಆಯೋಜಿಸುವಂತೆ ಸೂಚಿಸಿದೆ.
ಈ ಕುರಿತು ಸುಪ್ರೀಂ ಕೋರ್ಟ್ ಡಿಸೆಂಬರ್ 16ರಂದು ತೀರ್ಪು ನೀಡಿದೆ. ‘ಜವಾಹರ ನವೋದಯ ವಿದ್ಯಾಲಯಗಳನ್ನು ಸ್ಥಾಪಿಸುವುದಿಲ್ಲ ಎಂದು ತಮಿಳುನಾಡು ಸರ್ಕಾರ ಹೇಳುವಂತಿಲ್ಲ. ಈ ಶಾಲೆಗಳನ್ನು ಸ್ಥಾಪಿಸುವ ಪ್ರಕ್ರಿಯೆಗೆ 15 ದಿನಗಳ ಒಳಗಾಗಿ ಚಾಲನೆ ನೀಡಬೇಕು’ ಎಂದು ನಿರ್ದೇಶನ ನೀಡಿದೆ.
‘ರಾಜ್ಯದ ಪ್ರತಿ ಜಿಲ್ಲೆಯಲ್ಲಿ ನವೋದಯ ಶಾಲೆ ಸ್ಥಾಪಿಸಲು ಎಷ್ಟು ಜಮೀನು ಅಗತ್ಯವಿದೆ ಎಂಬ ಬಗ್ಗೆ ವಿವರಗಳನ್ನು ಸಿದ್ಧಪಡಿಸಬೇಕು’ ಎಂದೂ ಸೂಚಿಸಿದೆ.
6ರಿಂದ 10ನೇ ತರಗತಿವರೆಗೆ ಮೂರು ಭಾರತೀಯ ಭಾಷೆಗಳಲ್ಲಿ ಬೋಧಿಸಬೇಕು. ಇವುಗಳಲ್ಲಿ ಎರಡು ಭಾರತೀಯ ಭಾಷೆಗಳೇ ಆಗಿರಬೇಕು ಎಂದು ರಾಷ್ಟ್ರೀಯ ಶಿಕ್ಷಣ ನೀತಿ–2020 (ಎನ್‌ಇಪಿ) ಹೇಳುತ್ತದೆ.
6 ರಾಜ್ಯಗಳಿಗೆ ಪತ್ರ: ಎನ್‌ಇಪಿ ಅಡಿ ಕೇಂದ್ರ ಸರ್ಕಾರ ರೂಪಿಸಿರುವ ನೀತಿಯನ್ನು ಪಾಲನೆ ಮಾಡುವಂತೆ ಸೂಚಿಸಿ ತಮಿಳುನಾಡು, ಕೇರಳ, ಪುದುಚೆರಿ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಛತ್ತೀಸಗಢ ರಾಜ್ಯಗಳಿಗೆ ಕೇಂದ್ರ ಸರ್ಕಾರ ಎರಡನೇ ಬಾರಿ ಪತ್ರ ಬರೆದಿದೆ.
ಈ ಮೊದಲು, 2023ರ ಫೆಬ್ರುವರಿ 9ರಂದು ಈ ರಾಜ್ಯಗಳಿಗೆ ಪತ್ರ ಬರೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.