ADVERTISEMENT

ತಮಿಳುನಾಡು: ಪೊಲೀಸ್‌ ವಶದಲ್ಲಿ ಇರುವಾಗಲೇ ತಂದೆ, ಮಗನ ಸಾವು

ಭಾರತದ ಜಾರ್ಜ್‌ ಫ್ಲಾಯ್ಡ್‌ ಘಟನೆ ಎಂದು ಹೋಲಿಕೆ, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ

ಪಿಟಿಐ
Published 27 ಜೂನ್ 2020, 19:31 IST
Last Updated 27 ಜೂನ್ 2020, 19:31 IST
ತೂತುಕುಡಿಯ ಜಯರಾಜ್‌, ಫೆನಿಕ್ಸ್‌ ಮತ್ತು ಅಮೆರಿಕದ ಜಾರ್ಜ್‌ ಫ್ಲಾಯ್ಡ್‌
ತೂತುಕುಡಿಯ ಜಯರಾಜ್‌, ಫೆನಿಕ್ಸ್‌ ಮತ್ತು ಅಮೆರಿಕದ ಜಾರ್ಜ್‌ ಫ್ಲಾಯ್ಡ್‌   

ಚೆನ್ನೈ/ನವದೆಹಲಿ: ತಮಿಳುನಾಡಿನ ತೂತುಕುಡಿಯಲ್ಲಿ ಪೊಲೀಸ್‌ ವಶದಲ್ಲಿರುವಾಗಲೇ ತಂದೆ ಹಾಗೂ ಮಗ ಮೃತಪಟ್ಟಿರುವುದು ದೇಶದಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಪೊಲೀಸರ ಚಿತ್ರಹಿಂಸೆಗೆ ಇಬ್ಬರೂ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳ ಮುಖಾಂತರ ಜನರು ಈ ಕುರಿತು ತೀವ್ರ ಆಕ್ರೋಶ ಹೊರ
ಹಾಕುತ್ತಿದ್ದಾರೆ.

ಈ ಪ್ರಕರಣವನ್ನು ಅಮೆರಿಕದಲ್ಲಿ ನಡೆದ ಜಾರ್ಜ್‌ ಫ್ಲಾಯ್ಡ್‌ ಹತ್ಯೆಘಟನೆಗೆ ಹೋಲಿಕೆ ಮಾಡಲಾಗುತ್ತಿದ್ದು, ಟ್ವಿಟರ್‌ನಲ್ಲಿ #JusticeforJayarajAndBennicks‌ ಮತ್ತು #GeorgeFloydOfIndia ಎಂಬ ಎರಡು ವಿಷಯಗಳು ಟ್ರೆಂಡಿಂಗ್‌ ಆಗಿದೆ. ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ, ನಟಿ ಪ್ರಿಯಾಂಕ ಚೋಪ್ರಾ ಸೇರಿದಂತೆ ನಟ–ನಟಿಯರು, ರಾಜಕೀಯ ಮುಖಂಡರು ಈ ಘಟನೆಯನ್ನು ಖಂಡಿಸಿದ್ದಾರೆ.

ADVERTISEMENT

ನಿಗದಿತ ಅವಧಿ ಮೀರಿ ಮೊಬೈಲ್‌ ಮಳಿಗೆಯನ್ನು ತೆರೆದಿದ್ದ ಕಾರಣಜೂನ್‌ 19ರಂದು ಪಿ.ಜಯರಾಜ್‌ ಹಾಗೂ ಅವರ ಮಗ ಬೆನಿಕ್ಸ್‌ನನ್ನು ಪೊಲೀಸರು ಬಂಧಿಸಿದ್ದರು.ಪೊಲೀಸರಿಗೆ ಬೆದರಿಕೆ ಹಾಕಿರುವುದು ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪದಡಿ ಜಯರಾಜ್‌ ಹಾಗೂ ಬೆನಿಕ್ಸ್‌ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.ಇದಾದ ನಾಲ್ಕು ದಿನಗಳ ಬಳಿಕ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಶಾಂತನ್‌ಕುಲಂ ಪೊಲೀಸ್‌ ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ಇವರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ‘ಮೃತದೇಹಗಳ ಗುದದ್ವಾರದಲ್ಲಿ ಗಾಯಗಳಿದ್ದವು, ಎದೆಯ ಮೇಲಿನ ಕೂದಲುಗಳನ್ನು ಕಿತ್ತು ತೆಗೆದಂಥ ಚಿತ್ರಹಿಂಸೆಯ ಕುರುಹುಗಳು ಇದ್ದವು. ಇಬ್ಬರ ಸಾವಿಗೆ ಕಾರಣರಾದ ಸಿಬ್ಬಂದಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು’ ಎಂದು ಸಂಬಂಧಿಕರು ಆಗ್ರಹಿಸಿದ್ದಾರೆಎಂದು ಎನ್‌ಡಿಟಿವಿ ವರದಿ ಮಾಡಿದೆ.

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೇಮೃತದೇಹಗಳನ್ನು ತೆಗೆದುಕೊಂಡು ಹೋಗುವುದಿಲ್ಲ ಎಂದು ಸಂಬಂಧಿಕರು ಪಟ್ಟುಹಿಡಿದಿದ್ದರು. ಅಧಿಕಾರಿಗಳು ಮನವೊಲಿಸಿದ ಬಳಿಕ, ಗುರುವಾರ ಮೃತದೇಹವನ್ನು ಪಡೆದಿದ್ದರು.\

ಮದ್ರಾಸ್‌ ಹೈಕೋರ್ಟ್‌ನಿಂದ‌ ವಿಚಾರಣೆ

ತಮಿಳುನಾಡಿನಾದ್ಯಂತ ಘಟನೆ ಖಂಡಿಸಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದಾರೆ. ತೂತುಕುಡಿ ಜಿಲ್ಲೆಯಾದ್ಯಂತ ಶುಕ್ರವಾರ ವ್ಯಾಪಾರಿಗಳು ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೇಗೃಹ ಇಲಾಖೆ ಇಬ್ಬರು ಸಬ್‌ಇನ್‌ಸ್ಪೆಕ್ಟರ್‌ ಸೇರಿದಂತೆ ನಾಲ್ವರು ಪೊಲೀಸ್‌ ಸಿಬ್ಬಂದಿಯನ್ನು ಅಮಾನತುಗೊಳಿಸಿದೆ. ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ಘಟನೆ ಕುರಿತು ಸಂತಾಪ ವ್ಯಕ್ತಪಡಿಸಿದ್ದು, ಕುಟುಂಬಕ್ಕೆ ₹20 ಲಕ್ಷ ಪರಿಹಾರ ಘೋಷಿಸಿದ್ದಾರೆ. ಆದರೆ, ಪೊಲೀಸ್‌ ಕಿರುಕುಳ ಕುರಿತ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಪ್ರಕರಣವನ್ನು ಮದ್ರಾಸ್‌ ಹೈಕೋರ್ಟ್‌ನ ಮಧುರೈ ಪೀಠ ವಿಚಾರಣೆಗೆ ಕೈಗೆತ್ತಿಕೊಂಡಿದೆ.

ಘಟನೆಯು ರಾಜಕೀಯ ತಿರುವನ್ನೂ ಪಡೆದಿದ್ದು, ಎಐಎಡಿಎಂಕೆ ಸರ್ಕಾರವನ್ನು ವಿರೋಧ ಪಕ್ಷವಾದ ಡಿಎಂಕೆ ಗುರಿಯಾಗಿಸಿದೆ. ಕಾನೂನನ್ನು ಪೊಲೀಸರೇ ಕೈಗೆತ್ತಿಕೊಳ್ಳಲು ಆಡಳಿತ ಪಕ್ಷ ಅವಕಾಶ ಮಾಡಿಕೊಟ್ಟಿದೆ ಎಂದು ಡಿಎಂಕೆ ಆರೋಪಿಸಿದ್ದು, ಮೃತರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದೆ.

***

ಘಟನೆ ವಿವರ ಕೇಳಿ ಬೇಸರ ಹಾಗೂ ಸಿಟ್ಟು ಬರುತ್ತಿದೆ. ಅಪರಾಧ ಏನೇ ಇರಲಿ, ಇಂಥ ಕಿರುಕುಳ ಸರಿಯಲ್ಲ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕು. ಈ ಘಟನೆ ವಿರುದ್ಧ ಜನರು ಜೊತೆಯಾಗಿ ಧ್ವನಿ ಎತ್ತಬೇಕು.

-ಪ್ರಿಯಾಂಕಾ ಚೋಪ್ರಾ,ನಟಿ

***

ನೆಚ್ಚಿನ ಬಾಲಿವುಡ್‌ ಸೆಲೆಬ್ರೆಟಿಗಳೇ, ತಮಿಳುನಾಡಿನಲ್ಲಿ ನಡೆದ ಘಟನೆ ನಿಮ್ಮ ಗಮನಕ್ಕೆ ಬಂದಿದೆಯೇ ಅಥವಾ ನಿಮ್ಮ ಇನ್‌ಸ್ಟಾಗ್ರಾಮ್‌ ಖಾತೆ ಕೇವಲ ಇತರೆ ದೇಶಗಳಲ್ಲಿ ನಡೆದ ಘಟನೆಯನ್ನಷ್ಟೇ ಖಂಡಿಸುತ್ತದೆಯೇ. ಭಾರತದ ಜಾರ್ಜ್‌ ಫ್ಲಾಯ್ಡ್‌ಗಳು ಅದೆಷ್ಟೋ ಇದ್ದಾರೆ. ಪೊಲೀಸರ ಇಂಥ ಕಿರುಕುಳ, ಲೈಂಗಿಕ ದೌರ್ಜನ್ಯ ಬೇಸರ ತರಿಸುತ್ತದೆ

-ಜಿಗ್ನೇಶ್‌ ಮೆವಾನಿ,ಶಾಸಕ

***

ಯಾರೂ ಕಾನೂನಿಗಿಂತ ದೊಡ್ಡವರಲ್ಲ. ಈ ಅಮಾನವೀಯ ಕೃತ್ಯವನ್ನು ಖಂಡಿಸುತ್ತೇನೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ

-ಜಯಂ ರವಿ,ನಟ

***

ನಮ್ಮನ್ನು ರಕ್ಷಿಸಬೇಕಾದವರೇ ಕ್ರೂರವಾಗಿ ವರ್ತಿಸಿದರೆ ಇದಕ್ಕಿಂತ ದೊಡ್ಡ ದುರಂತ ಬೇರಿಲ್ಲ. ಘಟನೆ ಕುರಿತು ಸರ್ಕಾರ ಸೂಕ್ತ ತನಿಖೆ ನಡೆಸಲಿ

-ರಾಹುಲ್‌ ಗಾಂಧಿ,ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.