ADVERTISEMENT

ತೂತುಕುಡಿ ಪ್ರಕರಣ| ತಂದೆ ಹಾಗೂ ಮಗನಿಗೆ ಠಾಣೆಯಲ್ಲಿ ಚಿತ್ರಹಿಂಸೆ: ಸಿಬಿಐ

ಅಪರಾಧವನ್ನು ಮುಚ್ಚಿಹಾಕಲು ನಕಲಿ ಎಫ್‌ಐಆರ್‌ ದಾಖಲಿಸಿದ ಪೊಲೀಸರು: ಸಿಬಿಐ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 16:29 IST
Last Updated 27 ಅಕ್ಟೋಬರ್ 2020, 16:29 IST
ಸಿಬಿಐ
ಸಿಬಿಐ   

ಚೆನ್ನೈ: ತಮಿಳುನಾಡಿನ ತೂತುಕುಡಿಯಲ್ಲಿ ಪೊಲೀಸ್‌ ವಶದಲ್ಲಿರುವಾಗಲೇ ತಂದೆ ಹಾಗೂ ಮಗ ಮೃತಪಟ್ಟ ಘಟನೆಗೆ ಸಂಬಂಧಿಸಿದ ಆರೋಪಪಟ್ಟಿಯಲ್ಲಿ ‘ಇಬ್ಬರಿಗೂ ಪೊಲೀಸರು ಆರು ಗಂಟೆಗೂ ಅಧಿಕ ಕಾಲ ಥಳಿಸಿ, ಚಿತ್ರಹಿಂಸೆ ನೀಡಿದ್ದರು’ ಎಂದು ಸಿಬಿಐ ಉಲ್ಲೇಖಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಕಳೆದ ಜೂನ್‌ 19ರಂದು ಲಾಕ್‌ಡೌನ್‌ ವೇಳೆ ನಿಗದಿತ ಅವಧಿ ಮೀರಿ ಮೊಬೈಲ್‌ ಮಳಿಗೆ ತೆರೆದಿದ್ದರು ಎಂಬ ಕಾರಣಕ್ಕೆ ಪಿ.ಜಯರಾಜ್‌ ಹಾಗೂ ಅವರ ಮಗ ಬೆನಿಕ್ಸ್‌ನನ್ನು ಪೊಲೀಸರು ಬಂಧಿಸಿದ್ದರು. ಪೊಲೀಸರಿಗೆ ಬೆದರಿಕೆ ಹಾಕಿರುವುದು ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪದಡಿ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದಾದ ನಾಲ್ಕು ದಿನಗಳ ಬಳಿಕ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಘಟನೆ ದೇಶದಾದ್ಯಂತ ಸಾಕಷ್ಟು ಚರ್ಚೆಗೆ ಒಳಗಾಗಿತ್ತು.

‘ಪೊಲೀಸರ ಜೊತೆಗೆ ಹೇಗೆ ವರ್ತಿಸಬೇಕು ಎಂದು ಪಾಠ ಕಲಿಸಬೇಕು’ ಎನ್ನುವ ಉದ್ದೇಶಹೊಂದಿದ್ದ ಪೊಲೀಸರು ಇಬ್ಬರಿಗೂ ಮನಬಂದಂತೆ ಥಳಿಸಿದ್ದಾರೆ. ಇದು ಎಷ್ಟು ಕ್ರೂರವಾಗಿತ್ತೆಂದರೆ, ಶಾಂತನ್‌ಕುಲಂ ಪೊಲೀಸ್‌ ಠಾಣೆಯ ಗೋಡೆಯ ಮೇಲೆ ಇಬ್ಬರ ರಕ್ತ ಸಿಡಿದಿತ್ತು ಎಂದು ವಿಧಿವಿಜ್ಞಾನ ಸಾಕ್ಷ್ಯಗಳು ಹೇಳಿವೆ.

ADVERTISEMENT

ರಾತ್ರಿ 7.45ರಿಂದ ಬೆಳಗಿನ ಜಾವ 3 ಗಂಟೆಯವರೆಗೂ ಇಬ್ಬರಿಗೂ ಚಿತ್ರಹಿಂಸೆ ನೀಡಲಾಗಿತ್ತು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಠಾಣೆಯ ನೆಲದಲ್ಲಿ ಇದ್ದ ರಕ್ತವನ್ನು ಧರಿಸಿದ್ದ ಬಟ್ಟೆಯಿಂದಲೇ ಸ್ವಚ್ಛಮಾಡುವಂತೆಯೂ ಬೆನಿಕ್ಸ್‌ಗೆ ಪೊಲೀಸರು ಸೂಚಿಸಿದ್ದರು. ಅಪರಾಧವನ್ನು ಮುಚ್ಚಿಹಾಕಲು ಇಬ್ಬರ ವಿರುದ್ಧ ಪೊಲೀಸರು ನಕಲಿ ಎಫ್‌ಐಆರ್‌ ದಾಖಲಿಸಿದ್ದರು ಎಂದು ತಿಳಿಸಿರುವ ಸಿಬಿಐ, ಇಬ್ಬರೂ ಲಾಕ್‌ಡೌನ್‌ ಮಾರ್ಗಸೂಚಿಯನ್ನು ಉಲ್ಲಂಘಿಸಿರಲಿಲ್ಲ ಎಂದು ತನಿಖೆ ವೇಳೆ ತಿಳಿದುಬಂದಿದೆ ಎಂದಿದೆ.

ಮರುದಿನ, ಕೋರ್ಟ್‌ಗೆ ಹಾಜರುಪಡಿಸುವ ವೇಳೆ ಇಬ್ಬರ ರಕ್ತಸಿಕ್ತ ಬಟ್ಟೆಯನ್ನು ಎರಡು ಬಾರಿ ಬದಲಾಯಿಸಲಾಗಿದೆ. ಈ ಬಟ್ಟೆಯನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸದೆ ಸರ್ಕಾರಿ ಆಸ್ಪತ್ರೆಯ ಕಸದ ಬುಟ್ಟಿಗೆ ಎಸೆಯಲಾಗಿತ್ತು ಎಂದು ಆರೋಪಪಟ್ಟಿಯಲ್ಲಿ ಸಿಬಿಐ ಉಲ್ಲೇಖಿಸಿದೆ. ‘ಇನ್‌ಸ್ಪೆಕ್ಟರ್‌ ಎಸ್‌.ಶ್ರೀಧರ್‌ ಪ್ರಚೋದನೆಯಿಂದ ಪೊಲೀಸರು ಗಂಟೆಗಟ್ಟಲೆ ಇಬ್ಬರಿಗೂ ಹೊಡೆದಿದ್ದಾರೆ, ಚಿತ್ರಹಿಂಸೆ ನೀಡಿದ್ದಾರೆ’ ಎಂದು ತಿಳಿಸಲಾಗಿದೆ.

‘ಪೊಲೀಸರ ಜೊತೆ ಹೇಗೆ ವರ್ತಿಸಬೇಕು ಎನ್ನುವುದನ್ನು ಇವರಿಗೆ ಕಲಿಸಿ’ ಎಂದು ಪ್ರೇರೇಪಿಸುತ್ತಿದ್ದ ಆರೋಪಿ ಶ್ರೀಧರ್‌, ಸಿಬ್ಬಂದಿಯು ಹೊಡೆಯುವುದನ್ನು ನಿಲ್ಲಿಸಿದರೆ ಮತ್ತೆ ಹೊಡೆಯುವಂತೆ ಸೂಚಿಸಿದ್ದರು. ಬಟ್ಟೆ ಬಿಚ್ಚಿಸಿ, ಕೇವಲ ಒಳಉಡುಪಿನಲ್ಲಿ ನಿಲ್ಲಿಸಿ, ಟೇಬಲ್‌ಗೆ ಬಗ್ಗಿ ನಿಲ್ಲುವಂತೆ ಹೇಳಿ ಕೈಕಾಲು ಹಿಡಿದು ಲಾಠಿಯಲ್ಲಿ ಹೊಡೆಯಲಾಗಿತ್ತು. ಜಯರಾಜ್‌, ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುತ್ತಿದ್ದರು. ಇದನ್ನು ಹೇಳಿಕೊಂಡರೂ ಪೊಲೀಸರು ತಲೆಕೆಡಿಸಿಕೊಂಡಿರಲಿಲ್ಲ.

‘ಮೃತದೇಹಗಳ ಗುದದ್ವಾರದಲ್ಲಿ ಗಾಯಗಳಿದ್ದವು, ಎದೆಯ ಮೇಲಿನ ಕೂದಲುಗಳನ್ನು ಕಿತ್ತು ತೆಗೆದಂಥ ಚಿತ್ರಹಿಂಸೆಯ ಕುರುಹುಗಳು ಇದ್ದವು. ಇಬ್ಬರ ಸಾವಿಗೆ ಕಾರಣರಾದ ಸಿಬ್ಬಂದಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು’ ಎಂದು ಜಯರಾಜ್‌ ಸಂಬಂಧಿಕರು ಆಗ್ರಹಿಸಿದ್ದರು. ಈ ಪ್ರಕರಣವನ್ನು ಅಮೆರಿಕದಲ್ಲಿ ನಡೆದ ಜಾರ್ಜ್‌ ಫ್ಲಾಯ್ಡ್‌ ಹತ್ಯೆಘಟನೆಗೆ ಹೋಲಿಕೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.