ಚೆನ್ನೈ: ತಮಿಳುನಾಡಿನ ಕೆಲವು ಭಾಗಗಳಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಮತ್ತು ಸದಸ್ಯರ ಹುದ್ದೆಗಳನ್ನು ಹರಾಜು ಹಾಕುತ್ತಿರುವುದು ನಡೆದಿದೆ.
ಗ್ರಾಮದ ಮುಖ್ಯಸ್ಥರೇ ಈ ಹುದ್ದೆಗಳನ್ನು ಹರಾಜು ಹಾಕುವ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆಯಾದ ಬಳಿಕ ಈ ಹುದ್ದೆಗಳನ್ನು ₹2 ಲಕ್ಷದಿಂದ ₹50 ಲಕ್ಷಕ್ಕೆ ಹರಾಜು ಹಾಕುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಹರಾಜಿನಲ್ಲಿ ಅತಿ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡುವವರು ಗ್ರಾಮದ ಮುಖ್ಯಸ್ಥರು ನೇಮಿಸುವ ಸಮಿತಿ ಬಳಿ ಹಣವನ್ನು ಠೇವಣಿ ಇಡಬೇಕು. ಹರಾಜು ಪ್ರಕ್ರಿಯೆ ನಡೆದ ಬಳಿಕ ಈ ಹುದ್ದೆಗಳಿಗೆ ಯಾರೂ ನಾಮಪತ್ರ ಸಲ್ಲಿಸದಂತೆ ಗ್ರಾಮದ ಮುಖ್ಯಸ್ಥರು ಆದೇಶ ಹೊರಡಿಸುತ್ತಾರೆ. ಒಂದು ವೇಳೆ, ಯಾರಾದರೂ ಚುನಾವಣೆಗೆ ಸ್ಪರ್ಧಿಸಿದರೂ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ. ಇದು ಗ್ರಾಮದ ಮುಖ್ಯಸ್ಥರ ಆದೇಶವನ್ನು ಗ್ರಾಮಸ್ಥರು ಗಂಭೀರವಾಗಿ ಪರಿಗಣಿಸುವುದಕ್ಕೆ ಸಾಕ್ಷಿ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.
ಪಂಚಾಯಿತಿ ಹುದ್ದೆಗಳಿಗೆ ಹರಾಜು ನಡೆಯುವುದು ಹೊಸತಲ್ಲ:ದಶಕಗಳಿಂದಲೂ ಪಂಚಾಯಿತಿ ಹುದ್ದೆಗಳನ್ನು ಹರಾಜು ಹಾಕಿಯೇ ಪಡೆಯಲಾಗುತ್ತಿದೆ. ಅದರಲ್ಲೂ ಪ್ರಬಲ ಜಾತಿಗಳಿರುವ ಗ್ರಾಮಗಳಲ್ಲೇ ಇದು ಹೆಚ್ಚು. ಜನರಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಬಗ್ಗೆ ಜಾಗೃತಿ ಮೂಡಿಸಿದರೂ ಯಾವುದೇ ರೀತಿ ಪರಿಣಾಮ ಬೀರಿಲ್ಲ’ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.