ADVERTISEMENT

ತಮಿಳು ನಾಡಗೀತೆ ಗಾಯನಕ್ಕೆ ತಡೆ: ಈಶ್ವರಪ್ಪ ವಿರುದ್ಧ ತಮಿಳುನಾಡಲ್ಲಿ ವ್ಯಾಪಕ ಆಕ್ರೋಶ

ಶಿವಮೊಗ್ಗದಲ್ಲಿ ಕಳೆದ ಶನಿವಾರ ಈ ಘಟನೆ ನಡೆದಿತ್ತು. ಆ ವೇದಿಕೆಯಲ್ಲಿ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅವರೂ ಇದ್ದರು.

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2023, 14:24 IST
Last Updated 28 ಏಪ್ರಿಲ್ 2023, 14:24 IST
ಕೆ.ಎಸ್‌.ಈಶ್ವರಪ್ಪ 
ಕೆ.ಎಸ್‌.ಈಶ್ವರಪ್ಪ    

ಚೆನ್ನೈ: ಕರ್ನಾಟಕ ವಿಧಾನಸಭೆ ಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ ತಮಿಳುನಾಡಿನ ನಾಡಗೀತೆಯ ಗಾಯನವನ್ನು ಅರ್ಧಕ್ಕೇ ತಡೆದು, ಕರ್ನಾಟಕದ ನಾಡಗೀತೆ ಗಾಯನಕ್ಕೆ ಅನುವು ಮಾಡಿಕೊಟ್ಟ ಬಿಜೆಪಿ ಶಾಸಕ ಕೆ.ಎಸ್‌.ಈಶ್ವರಪ್ಪ ಅವರ ಕ್ರಮಕ್ಕೆ ತೀವ್ರ ಅಪಸ್ವರ ವ್ಯಕ್ತವಾಗಿದೆ.

ಶಿವಮೊಗ್ಗದಲ್ಲಿ ಕಳೆದ ಶನಿವಾರ ಈ ಘಟನೆ ನಡೆದಿತ್ತು. ಆ ವೇದಿಕೆಯಲ್ಲಿ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅವರೂ ಇದ್ದರು. ಈಶ್ವರಪ್ಪ ಕ್ರಮವನ್ನು ಪ್ರತಿಭಟಿಸದ ಅಣ್ಣಾಮಲೈ ಅವರು ಕ್ಷಮೆ ಕೋರಬೇಕು ಎಂದು ಇಲ್ಲಿನ ಪ್ರಮುಖ ರಾಜಕೀಯ ಪಕ್ಷಗಳು ಆಗ್ರಹಪಡಿಸಿವೆ.

‘ನೆರೆಯ ರಾಜ್ಯದಲ್ಲಿ ತಮಿಳು ನಾಡಗೀತೆ ಗಾಯನಕ್ಕೆ ಅಪಮಾನ ಆಗುವುದನ್ನು ತಡೆಯಲು ಆಗದ, ಅಣ್ಣಾಮಲೈ ಅವರು ತಮಿಳಿಗರ ಹಿತಾಸಕ್ತಿಯನ್ನು ರಕ್ಷಿಸುವರೇ’ ಎಂದು ಆಡಳಿತರೂಢ ಡಿಎಂಕೆ ಸೇರಿದಂತೆ ಪ್ರಮುಖ ಪಕ್ಷಗಳು ತರಾಟೆಗೆ ತೆಗೆದುಕೊಂಡಿವೆ.

ADVERTISEMENT

ಬಿಜೆಪಿ ಮೈತ್ರಿಪಕ್ಷವಾಗಿರುವ ಪಿಎಂಕೆ, ‘ಈಶ್ವರಪ್ಪ ಅವರ ಕ್ರಮವು ‘ಭಾಷಾ ಮತಾಂಧತೆ’ಯಾಗಿದೆ’ ಎಂದು ವಾಗ್ದಾಳಿ ನಡೆಸಿದೆ. ಕಾರ್ಯಕ್ರಮದ ಆಯೋಜಕರು ಈಗ ಆಗಿರುವ ಲೋಪಕ್ಕಾಗಿ ಕ್ಷಮೆ ಕೋರಬೇಕು ಎಂದೂ ಒತ್ತಾಯಿಸಿದೆ.

ಈ ಕುರಿತಂತೆ ಟ್ವೀಟ್‌ ಮಾಡಿರುವ ಡಿಎಂಕೆ ಸಂಸದೆ ಕನಿಮೋಳಿ ಅವರು, ‘ನಾಡಗೀತೆಗೆ ಅಪಮಾನ ಆಗುವುದನ್ನು ತಡೆಯಲಾಗದ ಅಣ್ಣಾಮಲೈ ಅವರು ತಮಿಳಿಗರ ಹಿತಾಸಕ್ತಿ ಕುರಿತು ಕಾಳಜಿ ವಹಿಸುವರೇ’ ಎಂದು ಪ್ರಶ್ನಿಸಿದ್ದಾರೆ.

ಡಿಎಂಕೆ ವಕ್ತಾರರಾದ ರಾಜೀವ್‌ ಗಾಂಧಿ ಅವರು, ‘ಅನ್ಯ ರಾಜ್ಯಗಳಲ್ಲಿ ತಮಿಳು ನಾಡಗೀತೆಯನ್ನು ಹಾಡುವ ಅಗತ್ಯವಿಲ್ಲ. ಆದರೆ, ವೋಟು ಗಳಿಕೆಗಾಗಿ ಅಣ್ಣಾಮಲೈ ಅವರು ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.  ‘ತಮಿಳು ನಾಡಗೀತೆ ಹಾಡಿಸಲು ತೀರ್ಮಾನಿಸಿದ ಮೇಲೆ ಅದನ್ನು ಅರ್ಧದಲ್ಲಿ ನಿಲ್ಲಿಸದಂತೆ ಕ್ರಮವಹಿಸಬೇಕಿತ್ತು’ ಎಂದು ಪ್ರತಿಕ್ರಿಯಿಸಿದ್ದಾರೆ. 

ಆದರೆ, ತಮ್ಮ ವಿರುದ್ಧ ಕೇಳಿಬಂದಿರುವ ಟೀಕೆಗಳಿಗೆ ಅಣ್ಣಾಮಲೈ ತಿರುಗೇಟು ನೀಡಿದ್ದಾರೆ.

’ಮತ್ತೊಬ್ಬರ ಮೇಲೆ ದಾಳಿ ನಡೆಸಲು ಅದು ಡಿಎಂಕೆ ವೇದಿಕೆ ಆಗಿರಲಿಲ್ಲ. ಮೊದಲು ಕರ್ನಾಟಕ ನಾಡಗೀತೆ ಹಾಡಬೇಕು ಎಂದು ಈಶ್ವರಪ್ಪ ಹೇಳಿದ್ದರು. ಇಲ್ಲಿ ನಾಡಗೀತೆಯಿಂದ ಕನ್ನಡ, ಮಲಯಾಳಂ ಉಲ್ಲೇಖವನ್ನೇ ಕೈಬಿಟ್ಟಿರುವ ಇತಿಹಾಸ ನಿಮ್ಮ ಹಿಂದಿದೆ’ ಎಂದು ಹರಿಹಾಯ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.