ADVERTISEMENT

ನವದೆಹಲಿ | ತೆರಿಗೆ ಪಾಲಿನಲ್ಲಿ ಅನ್ಯಾಯ: 'ಕೈ' ಹೋರಾಟ

ಪಿಟಿಐ
Published 1 ಆಗಸ್ಟ್ 2025, 15:29 IST
Last Updated 1 ಆಗಸ್ಟ್ 2025, 15:29 IST
ದೆಹಲಿಯ ಜಂತರ್ ಮಂತರ್‌ನಲ್ಲಿ ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ದೆಹಲಿಯ ಜಂತರ್ ಮಂತರ್‌ನಲ್ಲಿ ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.   

ನವದೆಹಲಿ: ತೆರಿಗೆ ಪಾಲು ಹಂಚಿಕೆ ಮತ್ತು ಅನುದಾನ‌ ನೀಡಿಕೆಯಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಭಾರಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಕೆಪಿಸಿಸಿ ಕಾನೂನು ಘಟಕದ ವತಿಯಿಂದ ಜಂತರ್ ಮಂತರ್‌ನಲ್ಲಿ ಶುಕ್ರವಾರ ದೆಹಲಿ ಚಲೋ ನಡೆಸಲಾಯಿತು.

'ನಾವು ಕೇಂದ್ರಕ್ಕೆ ಕಟ್ಟುವ ತೆರಿಗೆ ವಾರ್ಷಿಕ 4.5 ಲಕ್ಷ ಕೋಟಿ. ಇದರಲ್ಲಿ ನಮಗೆ ವಾಪಸ್ ಸಿಗುವುದು ಕೇವಲ 65 ಸಾವಿರ ಕೋಟಿ.‌ ನಾವು ಕಟ್ಟುವ ₹1 ತೆರಿಗೆಯಲ್ಲಿ ನಮಗೆ ಕೇವಲ 15 ಪೈಸೆ ವಾಪಸ್ ಬರುತ್ತಿದೆ. ವಿಶೇಷ ಅನುದಾನಗಳಿಗೂ ಕತ್ತರಿ ಹಾಕಲಾಗುತ್ತಿದೆ' ಎಂದು ಪ್ರತಿಭಟನಕಾರರು ಆರೋಪಿಸಿದರು.

'ಕೇಂದ್ರ ಸರ್ಕಾರದ ಅನ್ಯಾಯದಿಂದ 2017-18 ರಿಂದ ಈವರೆಗೂ ರಾಜ್ಯಕ್ಕೆ ಸುಮಾರು 2 ಲಕ್ಷ ಕೋಟಿ ನಷ್ಟವಾಗಿದೆ. ಕಳೆದ 5 ವರ್ಷಗಳಲ್ಲಿ 80 ಸಾವಿರ ಕೋಟಿ ಅನುದಾನ ಕಡಿಮೆಯಾಗಿದೆ' ಎಂದು ದೂರಿದರು.

ADVERTISEMENT

'ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಕರ್ನಾಟಕ ಶೇ 5 ರಷ್ಟು ಪಾಲು ಹೊಂದಿದೆ. ಆದರೆ, ನಾವು ದೇಶದ ಜಿಡಿಪಿಗೆ ನೀಡುತ್ತಿರುವ ಕೊಡುಗೆ ಶೇ 8.7. ದೇಶದಲ್ಲೇ ಅತೀ ಹೆಚ್ಚು ಜಿಎಸ್‌ಟಿ ಕರ್ನಾಟಕದಿಂದ ಸಂಗ್ರಹವಾಗುತ್ತಿದೆ. ಆದರೆ, ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ನಿರಂತರ ಅನ್ಯಾಯ ಮಾಡುತ್ತಾ ನಮ್ಮನ್ನು ಶೋಷಣೆ ಮಾಡುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಇಡೀ ಸರ್ಕಾರವೇ ನವದೆಹಲಿಯಲ್ಲಿ ಪ್ರತಿಭಟನೆ ನಡೆಸಿತ್ತು. ಮುಖ್ಯಮಂತ್ರಿಯವರು ಈ ಬಗ್ಗೆ ನಿರಂತರವಾಗಿ ಧ್ವನಿ ಎತ್ತುತ್ತಲೇ ಬಂದಿದ್ದಾರೆ. ಅನೇಕ ಪತ್ರಗಳನ್ನು ಪ್ರಧಾನಿ ಮತ್ತು ಹಣಕಾಸು ಸಚಿವರಿಗೆ ಬರೆದು ನ್ಯಾಯ ಕೊಡುವಂತೆ ಮನವಿ ಮಾಡಿದ್ದಾರೆ ಅದರೆ, ಕೇಂದ್ರ ಸರ್ಕಾರ ತಾರತಮ್ಯ ಮುಂದುವರಿಸುವ ಮೂಲಕ ಕರ್ನಾಟಕದ ಅಭಿವೃದ್ಧಿ ತಡೆಯುವ ಪ್ರಯತ್ನ ಮಾಡುತ್ತಿದೆ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾನೂನು, ಮಾನವ ಹಕ್ಕುಗಳು ಹಾಗೂ ಮಾಹಿತಿ ಹಕ್ಕು ಘಟಕದ ಅಧ್ಯಕ್ಷ ಸಿ.ಎಂ. ಧನಂಜಯ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಎಐಸಿಸಿ ಯುವ ಘಟಕದ ಮಾಜಿ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್, ಘಟಕದ ಉಪಾಧ್ಯಕ್ಷರಾದ ಮುನಿಯಪ್ಪ, ಶ್ರೀನಿವಾಸ್ ಮೂರ್ತಿ, ಪ್ರವೀಣ್ ಗೌಡ, ಗಿರೀಶ್ ಪಟೇಲ್, ಕಿರಣ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.