ಅಮರಾವತಿ: ಅನಂತಪುರ ಜಿಲ್ಲೆಯಲ್ಲಿ ಜರುಗಿದ ಬುಡಕಟ್ಟು ಸಮುದಾಯದ ಬಾಲಕಿಯ ನಿಗೂಢ ಸಾವಿಗೆ ಟಿಡಿಪಿ ಸರ್ಕಾರವೇ ಕಾರಣ ಎಂದು ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈ.ಎಸ್. ಜಗನ್ ಮೋಹನ್ ರೆಡ್ಡಿ ಕಿಡಿಕಾರಿದ್ದಾರೆ.
ಆಂಧ್ರಪ್ರದೇಶದಲ್ಲಿ ಮಹಿಳೆಯರಿಗೆ ಯಾವುದೇ ರೀತಿಯ ಸುರಕ್ಷತೆಯಿಲ್ಲ, ಭದ್ರತೆ ನೀಡುವ ವಿಷಯದಲ್ಲಿ ಸರ್ಕಾರ ಸೋತಿದೆ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜೂನ್ 3ರಂದು ಬಾಲಕಿಯು ಕಾಣೆಯಾಗಿದ್ದಳು, ಅವತ್ತೇ ಅವರ ಕುಟುಂಬವು ದೂರು ದಾಖಲಿಸಿತ್ತು. ಆದರೆ, ಸರ್ಕಾರವು ತಕ್ಷಣವೇ ಪ್ರತಿಕ್ರಿಯೆ ನೀಡದ ಪರಿಣಾಮವಾಗಿ ಜೂನ್ 8ರಂದು ಮೃತದೇಹ ಪತ್ತೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಕರಣ ದಾಖಲಾಗಿದ್ದರೂ ಕೂಡ ತಕ್ಷಣವೇ ಕ್ರಮಕೈಗೊಳ್ಳಲಾಗಿಲ್ಲ. ಚಂದ್ರಬಾಬು ನಾಯ್ಡು ಅವರ ಸರ್ಕಾರವು ಸೇಡಿನ ರಾಜಕಾರಣ ಮಾಡುವುದರಲ್ಲಿ ತಲ್ಲೀನವಾಗಿದೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯು ಹಳ್ಳಹಿಡಿದಿದೆ ಎಂದಿದ್ದಾರೆ.
ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಪೊಲೀಸರು, ಬಾಲಕಿಯು ನಾಪತ್ತೆಯಾದ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಅಂದು(ನಾಪತ್ತೆಯಾದ ದಿನ) ತಂಪು ಪಾನೀಯ ತರಲು ಹೋಗಿದ್ದ ಬಾಲಕಿ ಅಪರಿಚಿತ ವ್ಯಕ್ತಿಯ ಜೊತೆ ತೆರಳಿದ್ದು ವಿಚಾರಣೆಯಿಂದ ತಿಳಿದುಬಂದಿತ್ತು. ನಂತರ ಕುದೇರು ಮಂಡಲ ಬಳಿ ಶವ ಪತ್ತೆಯಾಗಿದೆ. ಈ ಘಟನೆಗೆ ಯಾವುದೇ ರಾಜಕೀಯ ಆಯಾಮವಿಲ್ಲ, ಕಾನೂನಿನ ಪ್ರಕಾರವೇ ತನಿಖೆ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಘಟನೆ ಕುರಿತು ಟಿಡಿಪಿ ನಾಯಕರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.