ಮಗು (ಪ್ರಾತಿನಿಧಿಕ ಚಿತ್ರ)
ಛಿಂದ್‌ವಾಡ: ಉದ್ಯೋಗ ಕಳೆದುಕೊಳ್ಳುವ ಆತಂಕದಿಂದ ತಮ್ಮ ನಾಲ್ಕನೇ ಮಗುವನ್ನು ಶಿಕ್ಷಕ ದಂಪತಿ ಅರಣ್ಯದಲ್ಲಿ ಬಿಟ್ಟುಹೋದ ಘಟನೆ ಮಧ್ಯಪ್ರದೇಶದ ಛಿಂದ್‌ವಾಡಾ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಒಂದೇ ಸಮನೆ ಮಗು ಅಳುತ್ತಿದ್ದುದನ್ನು ಕೇಳಿದ ಬೈಕ್ ಸವಾರರೊಬ್ಬರು ಸ್ಥಳಕ್ಕೆ ತೆರಳಿದಾಗ ಕೃತ್ಯ ಬಯಲಿಗೆ ಬಂದಿದೆ. ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್ 24ರಂದು ಗಂಡು ಮಗು ಜನಿಸಿತ್ತು. ಮಗುವಿನ ಪೋಷಕರು ಅದನ್ನು ಅರಣ್ಯದಲ್ಲಿ ಬಿಟ್ಟುಹೋಗಿದ್ದರು ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಕಲ್ಯಾಣಿ ಬರ್ಕಾಡೆ ತಿಳಿಸಿದರು.
ಮಗುವನ್ನು ರಕ್ಷಣೆ ಮಾಡಲಾಗಿದೆ. ತನಿಖೆ ನಡೆಸಿ, ಮಗುವಿನ ಪೋಷಕರನ್ನು ಪತ್ತೆ ಮಾಡಲಾಯಿತು ಎಂದು ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಬ್ಲು ದಾಂಡೋಲಿಯಾ (38) ಮತ್ತು ರಾಜಕುಮಾರಿ ದಾಂಡೋಲಿಯಾ (28) ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅವರಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ ಎಂದು ತಿಳಿಸಿದರು.
ಮಧ್ಯಪ್ರದೇಶದ ನಾಗರಿಕ ಸೇವಾ ನಿಯಮಗಳ ಪ್ರಕಾರ, 2001ರ ಜನವರಿ 26ರ ಬಳಿಕ ಸರ್ಕಾರಿ ಉದ್ಯೋಗಿಯೊಬ್ಬರು ನಾಲ್ಕನೇ ಮಗುವನ್ನು ಪಡೆದಲ್ಲಿ ಅವರು ಹುದ್ದೆಯಲ್ಲಿ ಮುಂದುವರಿಯಲು ಅನರ್ಹರಾಗುತ್ತಾರೆ.
ದಂಪತಿಯ ನೇಮಕಾತಿ ಕುರಿತ ದಾಖಲೆಗಳನ್ನು ಕೇಳಲಾಗಿದೆ. ತನಿಖೆ ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಗೋಪಾಲ್ ಸಿಂಗ್ ಬಘೇಲ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.