ADVERTISEMENT

ದೆಹಲಿ ಆರೋಗ್ಯ ಸಚಿವ ಜೈನ್ ಆರೋಗ್ಯ ಸ್ಥಿರ; ಚಿಕಿತ್ಸೆಗೆ ಹಿರಿಯ ವೈದ್ಯರ ತಂಡ ಸಿದ್ಧ

ಪಿಟಿಐ
Published 21 ಜೂನ್ 2020, 10:44 IST
Last Updated 21 ಜೂನ್ 2020, 10:44 IST
ಕೇಜ್ರಿವಾಲ್, ಸಿಸೋಡಿಯಾ ಜತೆ ಜೈನ್ (ಸಂಗ್ರಹ ಚಿತ್ರ)  ಕೃಪೆ: ಪಿಟಿಐ
ಕೇಜ್ರಿವಾಲ್, ಸಿಸೋಡಿಯಾ ಜತೆ ಜೈನ್ (ಸಂಗ್ರಹ ಚಿತ್ರ) ಕೃಪೆ: ಪಿಟಿಐ   

ನವದೆಹಲಿ: ಕೋವಿಡ್-19 ಬಾಧಿತ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುರ್ತು ನಿಗಾ ಘಟಕದಲ್ಲಿರುವ ಸಚಿವರಿಗೆ ಉತ್ತಮ ಚಿಕಿತ್ಸೆ ನೀಡುವುದಕ್ಕಾಗಿ ದೆಹಲಿಯ ಕೆಲವು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಹಿರಿಯ ವೈದ್ಯರ ತಂಡ ಸಿದ್ಧವಾಗಿದೆ.

55ರ ಹರೆಯದ ಜೈನ್ ಅವರ ಆರೋಗ್ಯ ಸುಧಾರಿಸುತ್ತಿದ್ದು, ಅವರ ಮೇಲೆ ನಿಗಾ ಇರಿಸಲಾಗಿದೆ ಎಂದು ಮೂಲಗಳು ಹೇಳಿವೆ.
ದೆಹಲಿಯ ಸಾಕೇತ್‌ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಶನಿವಾರ ಜೈನ್ ಅವರಿಗೆ ಪ್ಲಾಸ್ಮಾ ಥೆರಪಿ ನೀಡಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ.

ಹೆಚ್ಚಿನ ಚಿಕಿತ್ಸೆಯ ಅಗತ್ಯ ಬಂದರೆ ವೈದ್ಯರಿಗೆ ಸಹಾಯ ಮಾಡಲುಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗ ಹಿರಿಯ ವೈದ್ಯರ ತಂಡವೊಂದು ಸಿದ್ಧವಾಗಿದೆ ಎಂದು ಮೂಲಗಳು ಹೇಳಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಹೆಚ್ಚುವರಿ ವೈದ್ಯ ತಂಡದಲ್ಲಿ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (ಆರ್‌ಜಿಎಸ್‌ಎಸ್‌ಎಚ್), ಮೌಲಾನಾ ಆಜಾದ್ ಮೆಡಿಕಲ್ ಕಾಲೇಜು ಮತ್ತು ಖ್ಯಾತ ಖಾಸಗಿ ಆಸ್ಪತ್ರೆಗಳ ಹಿರಿಯ ವೈದ್ಯರು ಇದ್ದಾರೆ.

ADVERTISEMENT

ಮೊದಲು ಆರ್‌ಜಿಎಸ್‌ಎಸ್‌ಎಚ್ ಆಸ್ಪತ್ರೆಗೆ ದಾಖಲಾಗಿದ್ದ ಜೈನ್ ಅವರ ಆರೋಗ್ಯ ಸ್ಥಿತಿ ಗಂಭೀರವಾದಾಗ ಅವರನ್ನು ಮ್ಯಾಕ್ಸ್ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿತ್ತು. ಆರ್‌ಜಿಎಸ್‌ಎಸ್‌ಎಚ್ ಆಸ್ಪತ್ರೆ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆ ಆಗಿದ್ದು, ಅಲ್ಲಿ ಪ್ಲಾಸ್ಮಾ ಥೆರಪಿಗೆ ಅನುಮತಿ ಇಲ್ಲ. ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸುವ ಮುನ್ನ ನಾವು ಎಲ್ಲ ರೀತಿಯ ಚಿಕಿತ್ಸೆ ನೀಡಿದ್ದರೂ ಅವರ ಆರೋಗ್ಯ ಸ್ಥಿತಿ ಸುಧಾರಿಸಿಲ್ಲ ಎಂದು ರಾಜೀವ್ ಗಾಂಧಿ ಆಸ್ಪತ್ರೆಯ ಮೂಲಗಳು ಹೇಳಿವೆ.

ಜೂನ್ 17ಕ್ಕೆ ಜೈನ್ ಅವರಿಗೆ ಕೋವಿಡ್ -19 ದೃಢಪಟ್ಟಿದ್ದು, ಮರುದಿನವೇ ಆರ್‌ಜಿಎಸ್‌ಎಸ್‌ಎಚ್ ಆಸ್ಪತ್ರೆಗ ದಾಖಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.