ADVERTISEMENT

ಪಂಚಾಯಿತ್‌ ಸ್ಪರ್ಧೆಯಿಂದ ಹಿಂದೆ ಸರಿಯದ ಅಭ್ಯರ್ಥಿ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 11:13 IST
Last Updated 18 ಮಾರ್ಚ್ 2021, 11:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ನಿರ್ಧಾರ ಕೈಬಿಡಲು ವ್ಯಕ್ತಿ ನಿರಾಕರಿಸಿದ್ದರಿಂದ, ಅವರ 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಕೃತ್ಯ ಇಲ್ಲಿಗೆ 40 ಕಿ.ಮೀ ದೂರದ ಬಾರಾಬಂಕಿ ಜಿಲ್ಲೆಯ ಜೈದ್‌ಪುರ ವಲಯದಲ್ಲಿ ನಡೆದಿದೆ.

ಪೊಲೀಸರ ಪ್ರಕಾರ, ಬಾಲಕಿಯು ಶಾಲೆಯಿಂದ ಬರುವಾಗ ನಾಲ್ವರು ಯುವಕರು ಬಾಲಕಿಯನ್ನು ಅಪಹರಿಸಿ ಕೃತ್ಯ ಎಸಗಿದ್ದು, ಬಳಿಕ ಮನೆಯ ಸಮೀಪ ಬಿಟ್ಟು ಹೋಗಿದ್ದಾರೆ. ಶಂಕಿತ ಆರೋಪಿಗಳು ಬಾಲಕಿ ತಂದೆಯ ವಿರುದ್ಧ ಪ್ರತಿಸ್ಪರ್ಧಿಯಾಗಿದ್ದವನ ಬೆಂಬಲಿಗರು ಎನ್ನಲಾಗಿದೆ.

'ಪ್ರತಿಸ್ಪರ್ಧಿ ನನಗೆ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಕೈಬಿಡಲು ಒತ್ತಡ ಹೇರುತ್ತಿದ್ದ. ಇದಕ್ಕಾಗಿ ಹಣದ ಆಮಿಷವನ್ನು ಒಡ್ಡಲಾಗಿತ್ತು. ನಾನು ಒಪ್ಪಿರಲಿಲ್ಲ. ಸ್ಪಂದಿಸದ ಕಾರಣ ಮಗಳ ಮೇಲೆ ಕೃತ್ಯ ಎಸಗಲಾಗಿದೆ' ಎಂದು ಬಾಲಕಿಯ ತಂದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಪಂಚಾಯಿತಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ದಿನಾಂಕ ನಿಗದಿಯಾಗಿರಲಿಲ್ಲ. ಶೀಘ್ರದಲ್ಲಿಯೇ ನಡೆಯುವ ಸಂಭವವಿತ್ತು. ಶಂಕಿತ ನಾಲ್ವರು ಯುವಕರು ತಲೆಮರೆಸಿಕೊಂಡಿದ್ದಾರೆ. ಅವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.