ADVERTISEMENT

ಜಮ್ಮು: ಉಗ್ರರ ಉಪಟಳ, ಒಂದು ಸಾವು, ಶಂಕಿತನ ಸೆರೆ

ಗ್ರೆನೇಡ್‌ ಎಸೆತ: ಶಂಕಿತನ ಸೆರೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2019, 5:05 IST
Last Updated 8 ಮಾರ್ಚ್ 2019, 5:05 IST
ಸ್ಫೋಟ ನಡೆದ ಸ್ಥಳದ ದೃಶ್ಯ ಎಎಫ್‌ಪಿ ಚಿತ್ರ
ಸ್ಫೋಟ ನಡೆದ ಸ್ಥಳದ ದೃಶ್ಯ ಎಎಫ್‌ಪಿ ಚಿತ್ರ   

ಜಮ್ಮು: ಪುಲ್ವಾಮಾ ದಾಳಿ ಮತ್ತು ಅದರ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ವಿಷಮ ಸ್ಥಿತಿ ನಿರ್ಮಾಣವಾದ ಬೆನ್ನಿಗೇ ಜಮ್ಮುವಿನಲ್ಲಿ ಗ್ರೆನೇಡ್‌ ದಾಳಿ ನಡೆದಿದೆ.ಜಮ್ಮು ಬಸ್‌ ನಿಲ್ದಾಣದಲ್ಲಿ ಗುರುವಾರ ಗ್ರೆನೇಡ್‌ ದಾಳಿ ನಡೆದಿದ್ದು ಹದಿಹರೆಯದ ಹುಡುಗನೊಬ್ಬ ಮೃತಪಟ್ಟಿದ್ದಾನೆ. 32 ಮಂದಿ ಗಾಯಗೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರಗಾಮಿಗಳು ಆತ್ಮಾಹುತಿ ದಾಳಿ ನಡೆಸಿದ ಕೆಲವೇ ವಾರಗಳಲ್ಲಿ ಈ ವಿಧ್ವಂಸಕ ಕೃತ್ಯ ನಡೆದಿದೆ. ಶಂಕಿತ ದಾಳಿಕೋರನನ್ನು ಬಂಧಿಸಲಾಗಿದ್ದು, ಈತನಿಗೆ ಹಿಜ್ಬುಲ್‌ ಮುಜಾಹಿದೀನ್‌ ಸಂಘಟನೆ ಜತೆಗೆ ನಂಟು ಇದೆ ಎನ್ನಲಾಗಿದೆ.

ಮೃತನನ್ನು ಉತ್ತರಾಖಂಡದ ಹರಿದ್ವಾರ ನಿವಾಸಿ ಮೊಹಮ್ಮದ್‌ ಶಾರಿಕ್‌ (17) ಎಂದು ಗುರುತಿಸಲಾಗಿದೆ.ಜಮ್ಮು ನಗರದಲ್ಲಿ ಕೋಮು ಸಾಮರಸ್ಯ ಕೆಡಿಸುವುದೇ ಈ ದಾಳಿಯ ಉದ್ದೇಶ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ದಾಳಿ ನಡೆಸಿದ ವ್ಯಕ್ತಿಯು ಗುರುವಾರ ಬೆಳಿಗ್ಗೆಯಷ್ಟೇ ಕುಲ್ಗಾಂನಿಂದ ಜಮ್ಮುವಿಗೆ ಬಂದಿದ್ದ. ಹಿಜ್ಬುಲ್‌ ಮುಜಾಹಿದೀನ್ ಉಗ್ರಗಾಮಿ ಸಂಘಟನೆಯ ಕುಲ್ಗಾಂ ಜಿಲ್ಲಾ ಕಮಾಂಡರ್‌ ಫಾರೂಕ್‌ ಅಹ್ಮದ್‌ ಭಟ್‌ ಜತೆಗೆ ನಂಟು ಇರುವುದನ್ನು ಈತ ಒಪ್ಪಿಕೊಂಡಿದ್ದಾನೆ. ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಗಳು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧರಿಸಿ ಈತನನ್ನು ಬಂಧಿಸಲಾಗಿದೆ. ದಾಳಿ ನಡೆದು ಕೆಲವೇ ತಾಸುಗಳಲ್ಲಿ ಈತ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ.

ಬಸ್‌ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ನ ಮೇಲೆ ಗ್ರೆನೇಡ್‌ ಎಸೆಯಲಾಗಿದೆ. ಬಸ್‌ ಸಂಪೂರ್ಣವಾಗಿ ಜಖಂ ಆಗಿದೆ. ಸ್ಫೋಟದಿಂದಾಗಿ ಜನರು ದಿಗ್ಭ್ರಾಂತರಾದರು. ಈ ದಾಳಿಯ ಬಗ್ಗೆ ಯಾವುದೇ ಗುಪ್ತಚರ ಮಾಹಿತಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕಟ್ಟೆಚ್ಚರ ಇದ್ದಾಗಲೆಲ್ಲ ತಪಾಸಣೆಯನ್ನು ಬಿಗಿಗೊಳಿಸಲಾಗುತ್ತದೆ. ಹಾಗಿದ್ದರೂ ಇಂತಹ ಯಾರಾದರೊಬ್ಬರು ನುಸುಳಿ ಬಿಡುತ್ತಾರೆ ಎಂದು ಜಮ್ಮು ಪೊಲೀಸ್‌ ಮಹಾ ನಿರೀಕ್ಷಕ ಎಂ.ಕೆ. ಸಿನ್ಹಾ ಹೇಳಿದ್ದಾರೆ.

ಇದು ಮೂರನೇ ದಾಳಿ

ಕಳೆದ ವರ್ಷ ಡಿಸೆಂಬರ್‌ 28ರಂದು ಶಂಕಿತ ಉಗ್ರರು ಜಮ್ಮುವಿನ ಬಸ್‌ ನಿಲ್ದಾಣ ಸಮೀಪದಲ್ಲಿ ಗ್ರೆನೇಡ್‌ ದಾಳಿ ನಡೆಸಿದ್ದರು. ಅಲ್ಲಿನ ಪೊಲೀಸ್‌ ಠಾಣೆಯನ್ನು ಗುರಿಯಾಗಿಸಿ ಗ್ರೆನೇಡ್‌ ಎಸೆಯಲಾಗಿತ್ತು.

ಸರಿ ಸುಮಾರು ಅದೇ ಪ್ರದೇಶದಲ್ಲಿ 2018ರ ಮೇ 24ರಂದೂ ಗ್ರೆನೇಡ್‌ ದಾಳಿ ನಡೆದಿತ್ತು. ಇದರಲ್ಲಿ ಇಬ್ಬರು ಪೊಲೀಸರು ಮತ್ತು ಒಬ್ಬ ನಾಗರಿಕ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.