ADVERTISEMENT

ತೇಜಸ್‌ ಎಕ್ಸ್‌ಪ್ರೆಸ್‌ ಮೊದಲ ಖಾಸಗಿ ರೈಲು?

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 20:00 IST
Last Updated 9 ಜುಲೈ 2019, 20:00 IST
   

ನವದೆಹಲಿ: ದೆಹಲಿ–ಲಖನೌ ನಡುವೆ ಸಂಚರಿಸುವ ತೇಜಸ್‌ ಎಕ್ಸ್‌ಪ್ರೆಸ್‌ ಖಾಸಗಿಯವರು ನಿರ್ವಹಿಸುವ ದೇಶದ ಮೊದಲ ರೈಲಾಗಲಿದೆ ಎಂಬುದು ನಿಚ್ಚಳವಾಗಿದೆ. ಎರಡು ರೈಲುಗಳನ್ನು ಖಾಸಗಿಯವರಿಗೆ ನೀಡುವ ನೂರು ದಿನಗಳ ಕಾರ್ಯಸೂಚಿ ಪ್ರಕಾರ ರೈಲ್ವೆ ಇಲಾಖೆ ಮುಂದುವರಿಯುತ್ತಿದೆ. ರೈಲು ನಿರ್ವಹಣೆಯನ್ನು ಖಾಸಗಿಯವರಿಗೆ ನೀಡುವುದಕ್ಕೆ ಕಾರ್ಮಿಕ ಸಂಘಟನೆಗಳ ವಿರೋಧ ಇದ್ದರೂ ಅದನ್ನು ಲೆಕ್ಕಿಸದಿರಲು ನಿರ್ಧರಿಸಲಾಗಿದೆ.

ಖಾಸಗಿಯವರಿಗೆ ನೀಡಬಹುದಾದ ಎರಡನೆಯ ರೈಲು ಯಾವುದು ಎಂಬ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ಆರಂಭಿಸಿದ್ದಾರೆ. 500 ಕಿ.ಮೀ. ಒಳಗಿನ ಮಾರ್ಗTejasದಲ್ಲಿ ಸಂಚರಿಸುವ ರೈಲನ್ನು ಇದಕ್ಕೆ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಲಖನೌ–ದೆಹಲಿ ಮಾರ್ಗದ ಮತ್ತೊಂದು ರೈಲನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯೇ ಹೆಚ್ಚು ಎಂದು ಅಧಿಕಾರಿಗಳು ಹೇಳಿದ್ದಾರೆ.

ತೇಜಸ್‌ ಎಕ್ಸ್‌ಪ್ರೆಸ್‌ ರೈಲನ್ನು 2016ರಲ್ಲಿಯೇ ಘೋಷಿಸಲಾಗಿತ್ತು. ಆದರೆ, ಅದು ಆರಂಭ ಆಗಿರಲಿಲ್ಲ. ಇತ್ತೀಚೆಗೆ ಪ್ರಕಟಿಸಲಾದ ಹೊಸ ವೇಳಾಪಟ್ಟಿಯಲ್ಲಿ ಈ ರೈಲಿನ ಹೆಸರು ಸೇರ್ಪಡೆಯಾಗಿದೆ.

ADVERTISEMENT

ಈ ರೈಲಿನ ಬಗ್ಗೆ ಭಾರಿ ನಿರೀಕ್ಷೆ ಇದೆ. ರೈಲನ್ನು ಉತ್ತರ ಪ್ರದೇಶದ ಆನಂದನಗರ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ನಿರ್ವಹಣೆಗಾಗಿ ಬಹಿರಂಗ ಹರಾಜು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅದನ್ನು ಖಾಸಗಿಯವರಿಗೆ ಹಸ್ತಾಂತರಿಸಲಾಗುವುದು.ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್‌ಸಿಟಿಸಿ) ಮೂಲಕ ಇದು ನಡೆಯಲಿದೆ.

ರೈಲನ್ನು ಮೊದಲಿಗೆ ಐಆರ್‌ಸಿಟಿಸಿಗೆ ನೀಡಲಾಗುವುದು. ರೈಲ್ವೆಯ ಆರ್ಥಿಕ ವ್ಯವಹಾರ ನೋಡಿಕೊಳ್ಳುವ ಐಆರ್‌ಎಫ್‌ಸಿಗೆ ಐಆರ್‌ಸಿಟಿಸಿ ಗುತ್ತಿಗೆ ಹಣ ಮತ್ತು ಇತರ ಮೊತ್ತವನ್ನು ಪಾವತಿಸಲಿದೆ.

‘ಎರಡು ರೈಲುಗಳನ್ನು ಪ್ರಾಯೋಗಿಕ ನೆಲೆಯಲ್ಲಿ ಖಾಸಗಿಯವರಿಗೆ ನೀಡಲಾಗುವುದು. ಮುಂದಿನ 100 ದಿನಗಳೊಳಗೆ ಕನಿಷ್ಠ ಒಂದು ರೈಲಿನ ನಿರ್ವಹಣೆ ಖಾಸಗಿಯವರಿಗೆ ಹಸ್ತಾಂತರವಾಗಲಿದೆ ಎಂಬ ನಿರೀಕ್ಷೆ ಇದೆ. ಕಡಿಮೆ ದಟ್ಟಣೆ ಇರುವ ಮತ್ತು ಪ್ರಮುಖ ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ರೈಲುಗಳನ್ನು ಇದಕ್ಕೆ ಆಯ್ಕೆ ಮಾಡಿಕೊಳ್ಳಲು ಯೋಜಿಸಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲಾಭದಾಯಕ ಮಾರ್ಗ‌
ದೆಹಲಿ–ಲಖನೌ ನಡುವಣ ರೈಲಿಗೆ ಭಾರಿ ಬೇಡಿಕೆ ಇದೆ. ಈ ಮಾರ್ಗದಲ್ಲಿ ಈಗ 53 ರೈಲುಗಳು ಸಂಚರಿಸುತ್ತಿವೆ. ಆದರೆ, ಈ ಮಾರ್ಗದಲ್ಲಿ ರಾಜಧಾನಿ ಎಕ್ಸ್‌ಪ್ರೆಸ್‌ ಸಂಚಾರ ಇಲ್ಲ. ಸ್ವರ್ಣ ಶತಾಬ್ದಿ ಸಂಚಾರ ಇದೆ. ಈ ರೈಲಿನಲ್ಲಿ ಭಾರಿ ದಟ್ಟಣೆ ಇರುತ್ತದೆ. ಸುಮಾರು ಆರೂವರೆ ತಾಸಿನಲ್ಲಿ ರೈಲು ಈ ದೂರವನ್ನು ಕ್ರಮಿಸುತ್ತದೆ. ಇದೇ ಮಾರ್ಗದ ರೈಲುಗಳನ್ನು ಖಾಸಗಿಯವರಿಗೆ ಕೊಡುವ ಬಗ್ಗೆ ಚಿಂತಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.