ಪಟ್ನಾ: ಬಿಹಾರ ಚುನಾವಣೆಗೆ ಇಂಡಿಯಾ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಬಗ್ಗೆ ಆರ್‌ಜೆಡಿ ಪಕ್ಷದ ನಾಯಕ ತೇಜಸ್ವಿ ಯಾದವ್, ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವಂತೆ ಬಿಜೆಪಿಗೆ ಸವಾಲೆಸಿದ್ದಾರೆ.
‘ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಬಗ್ಗೆ ಇಂಡಿಯಾ ಬಣದಲ್ಲಿ ಯಾವುದೇ ಗೊಂದಲವಿರಲಿಲ್ಲ. ಈ ವಿಷಯದಲ್ಲಿ ನಮಗೆ ಮೊದಲೇ ಸ್ಪಷ್ಟತೆ ಇತ್ತು. ನಮಗೆ ಗೊಂದಲವಿರುವುದು ಎನ್‌ಡಿಎ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುವುದರ ಬಗ್ಗೆ. ಇಲ್ಲಿಯವರೆಗೆ ಅವರು(ಎನ್‌ಡಿಎ) ಯಾವುದೇ ಜಂಟಿ ಪತ್ರಿಕಾಗೋಷ್ಠಿ ನಡೆಸಿಲ್ಲ, ಮುಖ್ಯಮಂತ್ರಿ ಯಾರೆಂಬುವುದನ್ನು ಘೋಷಿಸಿಲ್ಲ’ ಎಂದು ತೇಜಸ್ವಿ ಹೇಳಿದ್ದಾರೆ.
‘ಅಮಿತ್ ಶಾ ಅವರ ಹೇಳಿಕೆಯನ್ನು ಗಮನಿಸಿದರೆ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಚುನಾವಣೆಯ ನಂತರ ಶಾಸಕಾಂಗ ಪಕ್ಷದ ಸದಸ್ಯರು ತಮ್ಮ ನಾಯಕನನ್ನು ಆಯ್ಕೆ ಮಾಡುತ್ತಾರೆ ಎಂದು ಅವರು(ಅಮಿತ್ ಶಾ) ಹೇಳಿದ್ದಾರೆ. ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗುವುದನ್ನು ಬಿಜೆಪಿ ಬಯಸುವುದಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ನಮಗಿರುವುದು ಒಂದೇ ಒಂದು ಗುರಿ. ಅದು ಬಿಹಾರವನ್ನು ನಂಬರ್ ಒನ್ ಮಾಡುವುದು. ಇದನ್ನು ಸಾಧಿಸಬೇಕಾದರೆ ನಮಗೆ14 ಕೋಟಿ ಬಿಹಾರಿಗಳ ಬೆಂಬಲ ಬೇಕು. ನಾವು ಸುಳ್ಳು ಭರವಸೆಗಳನ್ನು ಕೊಡುವುದಿಲ್ಲ. ಆಧಾರರಹಿತವಾಗಿ ಮಾತನಾಡುವುದಿಲ್ಲ. ನಾನು ಕೊಟ್ಟ ಮಾತಿನಂತೆ ನಡೆಯುವ ವ್ಯಕ್ತಿ. ನಾನು ಹೇಳಿದ್ದನ್ನೇ ಮಾಡಿ ತೋರಿಸುತ್ತೇನೆ. ಬಿಹಾರವನ್ನು ನಂಬರ್ ಒನ್ ಮಾಡುವುದು ನನ್ನ ಏಕೈಕ ಕನಸು’ ಎಂದು ತಿಳಿಸಿದ್ದಾರೆ.
‘ನಾವು ಹೊಸ ಬಿಹಾರವನ್ನು ನಿರ್ಮಿಸಬೇಕಿದೆ. ಬಿಹಾರದ ಜನ ಬದಲಾವಣೆಯನ್ನು ಬಯಸುತ್ತಿದ್ದಾರೆ. ಅಭಿವೃದ್ಧಿ ಹೊಂದಿದ ಬಿಹಾರವನ್ನು ನೋಡಲು ಬಯಸುತ್ತಾರೆ. ಅತ್ಯಂತ ಹಿಂದುಳಿದ ಸಮುದಾಯದಿಂದ ಬಂದ ಮುಖೇಶ್ ಸಹಾನಿ ಅವರನ್ನು ಉಪಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಅವರಲ್ಲದೆ ವಿವಿಧ ಸಮುದಾಯಕ್ಕೆ ಸೇರಿದ ಇತರ ಉಪ ಮುಖ್ಯಮಂತ್ರಿಗಳು ಇರುತ್ತಾರೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.