ADVERTISEMENT

ತೇಜ್‌ಪಾಲ್‌ ಪ್ರಕರಣ: ಸಂತ್ರಸ್ತೆಗೆ ನ್ಯಾಯಕಲ್ಪಿಸಲು ನ್ಯಾಯಾಂಗ ಸೋತಿದೆ– ಮೆಹ್ತಾ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 11:20 IST
Last Updated 10 ಆಗಸ್ಟ್ 2021, 11:20 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪಣಜಿ: ‘ತೇಜ್‌ಪಾಲ್‌ ಪ್ರಕರಣದಲ್ಲಿ ನಿರ್ದಿಷ್ಟವಾಗಿ ಆರೋಪ ದಾಖಲಿಸಿ ದೂರು ಸಲ್ಲಿಸಿದ್ದ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯವನ್ನು ಕಲ್ಪಿಸಲು ಒಂದು ಸಂಸ್ಥೆಯಾಗಿ ನ್ಯಾಯಾಂಗ ಸೋತಿದೆ. ದೇಶಕ್ಕೆ ಇದರ ಕಾರಣ ತಿಳಿಯಬೇಕಿದೆ’ ಎಂದು ಭಾರತದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ತೆಹಲ್ಕಾ ನಿಯತಕಾಲಿಕದ ಪ್ರಧಾನ ಸಂಪಾದಕ ತರುಣ್‌ ತೇಜ್‌ಪಾಲ್ ಅವರ ವಿರುದ್ಧ ಮಹಿಳಾ ಸಹೋದ್ಯೋಗಿಯು 2013ರಲ್ಲಿ ದಾಖಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಆರೋಪಿಯನ್ನು ಖುಲಾಸೆಗೊಳಿಸಿದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಮೆಹ್ತಾ ಈ ಮಾತು ಹೇಳಿದರು.

ಮೇಲ್ಮನವಿ ಕುರಿತಂತೆ ಗೋಪ್ಯ ವಿಚಾರಣೆಯನ್ನು ಕೋರಿರುವ ತೇಜ್‌ಪಾಲ್‌ ಪರ ವಕೀಲರ ಮನವಿಯನ್ನು ಉಲ್ಲೇಖಿಸಿದ ಅವರು, ಉಪಮೆಯೊಂದನ್ನು ಉಲ್ಲೇಖಿಸಿ ’ಕೋರ್ಟ್‌ನ ವಿಚಾರಣೆಯಲ್ಲಿ ಒಂದರ್ಥದಲ್ಲಿ ಅತ್ಯಾಚಾರ ಆರೋಪಿಯ ಬಟ್ಟೆ ಬಿಚ್ಚಿಸಲಾಗುತ್ತದೆ. ಇದೇ ಕಾರಣಕ್ಕೆ ಗೋಪ್ಯ ವಿಚಾರಣೆಯನ್ನು ಕೋರಿರಬೇಕು’ ಎಂದರು.

ADVERTISEMENT

‘ನಾನು ಪ್ರತಿ ಪದವನ್ನು ಪ್ರಾಮಾಣಿಕತೆ ಹಾಗೂ ಹೊಣೆಗಾರಿಕೆಯಿಂದ ಬಳಸುತ್ತಿದ್ದೇನೆ. ಸಂತ್ರಸ್ತೆಗೆ ಈ ಪ್ರಕರಣದಲ್ಲಿ ನ್ಯಾಯ ಒದಗಿಸಿಕೊಡಲು ಒಂದು ಸಂಸ್ಥೆಯಾಗಿ ನ್ಯಾಯಾಂಗ ಸೋತಿದೆ. ಎಲ್ಲ ಸಂತ್ರಸ್ತರಲ್ಲಿ ಇದು ನಕಾರಾತ್ಮಕ ಅಭಿಪ್ರಾಯವನ್ನು ಮೂಡಿಸಲಿದೆ‘ ಎಂದು ಮೆಹ್ತಾ ಹೇಳಿದರು.

ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಲ್ಲಿ ವಿಚಾರಣೆ ಕೈಗೊಂಡಿದ್ದ ನ್ಯಾಯಮೂರ್ತಿಗಳಾದ ಸುನಿಲ್‌ ದೇಶ್‌ಮುಖ್‌ ಮತ್ತು ಮಹೇಶ್ ಸೋನಕ್ ಅವರಿದ್ದ ಪೀಠ ಪ್ರಕರಣದ ವಿಚಾರಣೆ ಕೈಗೊಂಡಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್‌ 31ಕ್ಕೆ ನಿಗದಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.