ADVERTISEMENT

ತೆಲಂಗಾಣ ಬಂದ್‌: ಜನಜೀವನ ಅಸ್ತವ್ಯಸ್ತ

ಟಿಎಸ್‌ಆರ್‌ಟಿಸಿ ನೌಕರರ ಕರೆಗೆ ಉತ್ತಮ ಪ್ರತಿಕ್ರಿಯೆ: ಚರ್ಚೆಗೆ ಸರ್ಕಾರ ನಕಾರ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 18:25 IST
Last Updated 19 ಅಕ್ಟೋಬರ್ 2019, 18:25 IST
ಹೈದರಾಬಾದ್‌ನಲ್ಲಿ ಮುಷ್ಕರ ನಡೆಸಿದ ಟಿಎಸ್‌ಆರ್‌ಟಿಸಿ ನೌಕರರು ಶನಿವಾರ ಕೇಶಮುಂಡನ ಮಾಡಿಸಿಕೊಂಡರು   --–ಪಿಟಿಐ ಚಿತ್ರ
ಹೈದರಾಬಾದ್‌ನಲ್ಲಿ ಮುಷ್ಕರ ನಡೆಸಿದ ಟಿಎಸ್‌ಆರ್‌ಟಿಸಿ ನೌಕರರು ಶನಿವಾರ ಕೇಶಮುಂಡನ ಮಾಡಿಸಿಕೊಂಡರು   --–ಪಿಟಿಐ ಚಿತ್ರ   

ಹೈದರಾಬಾದ್‌: ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಎಸ್‌ಆರ್‌ಟಿಸಿ) ನೌಕರರು ರಾಜ್ಯದಾದ್ಯಂತ ಶನಿವಾರ ಕರೆ ನೀಡಿದ್ದ ಬಂದ್‌ನಿಂದ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿತು.

15 ದಿನಗಳಿಂದ ಕೈಗೊಂಡಿದ್ದಅನಿರ್ದಿಷ್ಟಾವಧಿ ಮುಷ್ಕರದ ಅಂಗವಾಗಿ ಟಿಎಸ್‌ಆರ್‌ಟಿಸಿ ಜಂಟಿ ಕ್ರಿಯಾ ಸಮಿತಿ ಬಂದ್‌ಗೆ ಕರೆ ನೀಡಿತ್ತು. ಇತರ ರಾಜ್ಯಗಳ ಸರ್ಕಾರಿ ನೌಕರರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಬಂದ್‌ಗೆ ಬೆಂಬಲ ನೀಡಿದ್ದವು.

ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವೆಡೆ ಕಲ್ಲು ತೂರಾಟ ನಡೆದ ಪ್ರಕರಣಗಳು ವರದಿಯಾಗಿವೆ. ಆಟೊ ರಿಕ್ಷಾ ಮತ್ತು ಕ್ಯಾಬ್‌ ಸಂಘಟನೆಗಳು ಸಹ ಬಂದ್‌ಗೆ ಬೆಂಬಲ ಸೂಚಿಸಿದ್ದರಿಂದ ಆಟೊ ರಿಕ್ಷಾ ಮತ್ತು ಕ್ಯಾಬ್‌ಗಳು ಸಹ ಸಂಚರಿಸಲಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ವಿರಳವಾಗಿತ್ತು.

ADVERTISEMENT

ನೌಕರರ ಜತೆ ಮಾತುಕತೆ ನಡೆಸುಂತೆ ಶುಕ್ರವಾರ ಹೈಕೋರ್ಟ್‌ ಸೂಚಿಸಿದ್ದರೂ ಸರ್ಕಾರ ಯಾವುದೇ
ಕ್ರಮಕೈಗೊಳ್ಳಲಿಲ್ಲ. ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್ ಸೂಚಿಸಿದ್ದಾರೆ.

ತೆಲಂಗಾಣ ಜನ ಸಮಿತಿ ನಾಯಕ ಪ್ರೊ. ಎಂ. ಕೋದಂಡರಾಮ್‌, ಟಿಡಿಪಿ ರಾಜ್ಯ ಘಟಕದ ಅಧ್ಯಕ್ಷ ಎಲ್‌. ರಮಣಾ, ಪ್ರಧಾನ ಕಾರ್ಯದರ್ಶಿ ರಾವುಲು ಚಂದ್ರಶೇಖರ್‌ ರೆಡ್ಡಿ ಮತ್ತು ಬಿಜೆಪಿ ನಾಯಕ ಮೊಥಕುಪಲ್ಲಿ ನರಸಿಂಹಲು ಸೇರಿದಂತೆ ಹಲವು ರಾಜಕೀಯ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ಮುಂಜಾಗ್ರತ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ.

ಅಸಾದುದ್ದೀನ್‌ ಓವೈಸಿ ನೇತೃತ್ವದ ಆಲ್‌ ಇಂಡಿಯಾ ಮಜ್ಲಿಸ್‌–ಎ–ಇತ್ತೇಹಾದುಲ್‌ ಮುಸ್ಲಿಮೀನ್‌ (ಎಐಎಂಐಎಂ) ಪಕ್ಷ ಬಂದ್‌ಗೆ ಬೆಂಬಲ ಸೂಚಿಸಿಲ್ಲ. ಟಿಆರ್‌ಎಸ್‌ ಮತ್ತು ರಾಜ್ಯ ಸರ್ಕಾರದ ಜತೆ ಓವೈಸಿ ಉತ್ತಮ ಸಂಬಂಧ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.