ADVERTISEMENT

ಪೊಲೀಸರ ಮೇಲೆ ದಾಳಿ: ತೆಲಂಗಾಣ ಬಿಜೆಪಿ ಮುಖ್ಯಸ್ಥ ಸೇರಿ ಹಲವರ ಬಂಧನ

ಐಎಎನ್ಎಸ್
Published 3 ಜನವರಿ 2022, 10:48 IST
Last Updated 3 ಜನವರಿ 2022, 10:48 IST
   

ಹೈದರಾಬಾದ್: ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂದಿ ಸಂಜಯ್‌ ಕುಮಾರ್‌ ಅವರನ್ನು ಬಂಧಿಸಲಾಗಿದೆ.ಸರ್ಕಾರಿ ಶಿಕ್ಷಕರು ಮತ್ತು ನೌಕರರ ವರ್ಗಾವಣೆಗೆ ಸಂಬಂಧಿಸಿ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಬದಲಾವಣೆ ತರುವಂತೆ ಒತ್ತಾಯಿಸಿ ಕರೀಂನಗರದಲ್ಲಿ ಭಾನುವಾರ ರಾತ್ರಿ ಪ್ರತಿಭಟಿಸುತ್ತಿದ್ದ ವೇಳೆ ಪೊಲೀಸರ ಮೇಲೆ ದಾಳಿ ನಡೆದಿದೆ.

ಕರೀಂನಗರ ಕ್ಷೇತ್ರದ ಸಂಸದರೂ ಆಗಿರುವ ಸಂಜಯ್‌ ನೇತೃತ್ವದಲ್ಲಿ ಬಿಜೆಪಿಯು, 'ಜಾಗರಣ್‌ ದೀಕ್ಷಾ' ಪ್ರತಿಭಟನೆ ಆಯೋಜಿಸಿತ್ತು. ಇದನ್ನು ಪೊಲೀಸರು ವಿಫಲಗೊಳಿಸಿದ್ದಾರೆ.

ಸಂಜಯ್‌ ಅವರನ್ನು ರಾತ್ರಿ ಮನಕೊಂಡುರ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಸೋಮವಾರ ಕರೀಂನಗರ ಪಟ್ಟಣದಲ್ಲಿರುವ ಪೊಲೀಸ್ ತರಬೇತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ADVERTISEMENT

ಸಂಸದರೂ ಸೇರಿದಂತೆ ಬಂಧಿತರನ್ನು ಕೋವಿಡ್–19 ಪರೀಕ್ಷೆಗೆ ಒಳಪಡಿಸಿ ಬಳಿಕ ಕೋರ್ಟ್‌ಗೆ ಹಾಜರುಪಡಿಸಲಾಗುವುದು ಎಂದು ಕರೀಂನಗರ ಪೊಲೀಸ್ ಕಮಿಷನರ್‌ ಸತ್ಯನಾರಾಯಣ ತಿಳಿಸಿದ್ದಾರೆ.

ಸಂಸದರ ಬಂಧನ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ರಾತ್ರೋರಾತ್ರಿ ಪೊಲೀಸ್ ತರಬೇತಿ ಕೇಂದ್ರದ ಬಳಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮತ್ತು ಪೊಲೀಸ್ ಕಮಿಷನರ್ ವಿರುದ್ಧ ಘೋಷಣೆ ಕೂಗಿದ್ದಾರೆ. ಈ ವೇಳೆಪೊಲೀಸರೊಂದಿಗೆ ವಾಗ್ವಾದಕ್ಕೆ ಮುಂದಾದ ಕೆಲವರನ್ನು ವಶಕ್ಕೆ ಪಡೆಯಲಾಗಿದೆ.

ಕೋವಿಡ್ ನಿಯಮ ಉಲ್ಲಂಘನೆ
ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಕಮಿಷನರ್‌, ಪ್ರಕರಣ ಸಂಬಂಧಕರೀಂನಗರದ ಎರಡು ಠಾಣೆಗಳಲ್ಲಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ವಿಪತ್ತು ನಿರ್ವಹಣೆ ಕಾಯ್ದೆ ಉಲ್ಲಂಘನೆ ಮಾಡಿದ್ದಕ್ಕಾಗಿ ಸೆಕ್ಷನ್‌ 51 -B ಅಡಿಯಲ್ಲಿ ಮತ್ತು ಮಾಸ್ಕ್‌ ಧರಿಸದ, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಕಾರಣ ಸೆಕ್ಷನ್‌188ರ ಅಡಿಯಲ್ಲಿ21 ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.ಹಾಗೆಯೇ, ಕನಿಷ್ಠ 70 ಜನರನ್ನು ವಶಕ್ಕೆ ಪಡೆಯಲಾಗಿತ್ತು. ಎಲ್ಲರಿಗೂ ನೋಟಿಸ್ ನೀಡಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಗಲಭೆ ಸೃಷ್ಟಿ, ಪೊಲೀಸರ ಮೇಲೆ ದಾಳಿ,ವಿಪತ್ತು ನಿರ್ವಹಣೆ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ 16 ಜನರ ವಿರುದ್ಧ ಐಪಿಸಿಯ ಸೆಕ್ಷನ್‌188, 332, 333, 149, 147, 188 ಮತ್ತು ಸೆಕ್ಷನ್ 5 (B) ಅಡಿಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ.

ಕೋವಿಡ್ ನಿಯಮಾವಳಿಗಳ ಜಾರಿ ಇರುವುದರಿಂದ ಪ್ರತಿಭಟನೆ ನಡೆಸದಂತೆ ಮತ್ತೆಮತ್ತೆ ಮನವಿ ಮಾಡಿದ್ದೆವು. ಆದರೂ, ಸಂಸದರು ಮತ್ತು ಇನ್ನೂ ಕೆಲವರು ನಿಯಮಗಳನ್ನು ಗಾಳಿಗೆ ತೂರಿ ಪ್ರತಿಭಟನೆ ಆರಂಭಿಸಿದ್ದಾರೆ. ಬಳಿಕ ಗಲಭೆ ಸೃಷ್ಟಿಸಿ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ ಎಂದೂ ಮಾಹಿತಿ ನೀಡಿದ್ದಾರೆ.

ದಾಳಿ ವೇಳೆ ಅಸಿಸ್ಟಂಟ್ ಕಮಿಷನರ್, ಸರ್ಕಲ್ ಇನ್‌ಸ್ಪೆಕ್ಟರ್‌ ಗಾಯಗೊಂಡಿದ್ದಾರೆ.

'ಅನುಮತಿ ಇಲ್ಲದಿದ್ದರೂ ಪ್ರತಿಭಟನೆ'
ಕರೀಂನಗರ ಸಂಸದರ ಪ್ರತಿಭಟನೆಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿತ್ತು. ಆದಾಗ್ಯೂ, 10 ಗಂಟೆಗಳ ಸುದೀರ್ಘ ಪ್ರತಿಭಟನೆ ನಡೆಸಲು ಸಂಸದರ ಕಚೇರಿಯಲ್ಲಿ ಬಿಜೆಪಿ ಸಿದ್ಧತೆ ಮಾಡಿಕೊಂಡಿತ್ತು.

ಸಂಸದರು ಬೆಂಬಲಿಗರೊಂದಿಗೆ ಕಚೇರಿಗೆ ಆಗಮಿಸಿದ ನಂತರ, ಪೊಲೀಸರು ಒಳಗೆ ಬರದಂತೆ ತಡೆಯಲು ಒಳಗಿನಿಂದ ಬೀಗ ಹಾಕಲಾಗಿತ್ತು. ಪ್ರತಿಭಟನೆ ವಿಫಲಗೊಳಿಸಿದರೆ, ತಮಗೆ ತಾವೇ ಬೆಂಕಿ ಹಚ್ಚಿಕೊಳ್ಳುವುದಾಗಿ ಕೆಲವರು ಬೆದರಿಕೆಯನ್ನೂ ಒಡ್ಡಿದ್ದರು.ಆದಾಗ್ಯೂ, ಪೊಲೀಸರು ಒಳಗೆ ಪ್ರವೇಶಿಸಿ ಪ್ರತಿಭಟನೆ ವಿಫಲಗೊಳಿಸಿದ್ದಾರೆ. ಈ ವೇಳೆ ಗಲಭೆ ನಡೆದಿದೆ.

ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಮತ್ತು ಮಾಜಿ ಸಚಿವ ಎಟಾಲ ರಾಜೇಂದರ್‌, ಸಂಸದರನ್ನು ಬಂಧಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮ. ಸಂಸದರು ತಮ್ಮ ಕಚೇರಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಆದರೆ, ಪೊಲೀಸರು ರಾಜ್ಯ ಸರ್ಕಾರದ ಆದೇಶದಂತೆ ಪ್ರತಿಭಟನೆಯನ್ನು ತಡೆದಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.