ADVERTISEMENT

ತೆಲಂಗಾಣ | ಔಷಧ ಕಾರ್ಖಾನೆಯಲ್ಲಿ ಸ್ಫೋಟ: 13 ಮಂದಿ ಸಾವು

ಏಜೆನ್ಸೀಸ್
Published 30 ಜೂನ್ 2025, 9:39 IST
Last Updated 30 ಜೂನ್ 2025, 9:39 IST
<div class="paragraphs"><p>ಔಷಧ ಘಟಕದಲ್ಲಿ ಸ್ಫೋಟ</p></div>

ಔಷಧ ಘಟಕದಲ್ಲಿ ಸ್ಫೋಟ

   

ಸಂಗಾರೆಡ್ಡಿ (ತೆಲಂಗಾಣ): ಇಲ್ಲಿನ ಔಷಧ ಕಾರ್ಖಾನೆಯಲ್ಲಿ ಸೋಮವಾರ ಸಂಭವಿಸಿದ ಸ್ಫೋಟದಲ್ಲಿ 13 ಕಾರ್ಮಿಕರು ಮೃತಪಟ್ಟಿದ್ದು, 34 ಮಂದಿ ಗಾಯಗೊಂಡಿದ್ದಾರೆ.

ಕಾರ್ಖಾನೆಯ ರಿಯಾಕ್ಟರ್‌ ಸ್ಫೋಟದಿಂದ ದುರ್ಘಟನೆ ನಡೆದಿದ್ದು, ಗಾಯಾಳುಗಳಲ್ಲಿ 12 ಮಂದಿಯ ಪರಿಸ್ಥಿತಿ ಗಂಭೀರವಾಗಿದೆ ಎಂದು ತೆಲಂಗಾಣದ ಆರೋಗ್ಯ ಸಚಿವ ದಾಮೋದರ ರಾಜಾ ನರಸಿಂಹ ತಿಳಿಸಿದ್ದಾರೆ. 

ADVERTISEMENT

ಪಾಶಮೈಲಾರಂ ಕೈಗಾರಿಕಾ ಪ್ರದೇಶದಲ್ಲಿರುವ ಸಿಗಾಚಿ ಫಾರ್ಮಾ ಕಂಪನಿಯ ರಿಯಾಕ್ಟರ್‌ನಲ್ಲಿ ರಾಸಾಯನಿಕ ವಸ್ತುವಿಗೆ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿದೆ ಎಂದು ಮೂಲಗಳು ಹೇಳಿವೆ. ಆದರೆ ಸ್ಫೋಟಕ್ಕೆ ನಿಖರ ಕಾರಣ ಸಮಗ್ರ ಪರಿಶೀಲನೆಯ ಬಳಿಕವೇ ತಿಳಿಯಲಿದೆ ಎಂದು ತಾಂತ್ರಿಕ ತಜ್ಞರು ತಿಳಿಸಿದ್ದಾರೆ.

‘ಸೋಮವಾರ ಬೆಳಿಗ್ಗೆ 9.28ರಿಂದ 9.35ರ ನಡುವೆ ಸ್ಫೋಟ ಸಂಭವಿಸಿದೆ. ಈ ವೇಳೆ ಕಾರ್ಖಾನೆಯಲ್ಲಿ 150 ಮಂದಿ ಕೆಲಸ ಮಾಡುತ್ತಿದ್ದರು. ಅದರಲ್ಲಿ ಸುಮಾರು 90 ಮಂದಿ ಸ್ಫೋಟ ನಡೆದ ಸ್ಥಳದ ಸಮೀಪದಲ್ಲೇ ಇದ್ದರು’ ಎಂದು ಕಾರ್ಖಾನೆಯ ಮೂಲಗಳನ್ನು ಉಲ್ಲೇಖಿಸಿ ಐಜಿಪಿ ವಿ.ಸತ್ಯನಾರಾಯಣ ಹೇಳಿದ್ದಾರೆ.

ಸತ್ತವರಲ್ಲಿ ಕೆಲವರ ಮೃತದೇಹ ಸಂಪೂರ್ಣ ಸುಟ್ಟುಹೋಗಿದ್ದು, ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ನಡೆಸಲಾಗುವುದು ಎಂದಿದ್ದಾರೆ.

ಸ್ಫೋಟದಿಂದ ಬೆಂಕಿ ಹಾಗೂ ದಟ್ಟ ಹೊಗೆ ಎದ್ದಿದೆ. ಅಗ್ನಿಶಾಮಕ ದಳದ 10 ವಾಹನಗಳನ್ನು ಬಳಸಿ ಬೆಂಕಿಯನ್ನು ಹತೋಟಿಗೆ ತರಲಾಯಿತು. ಸ್ಫೋಟದ ಸದ್ದು 5 ಕಿ.ಮೀ. ದೂರದವರೆಗೂ ಕೇಳಿಸಿದ್ದು, ಕಟ್ಟಡದ ಒಂದು ಭಾಗ ಕುಸಿದು ಬಿದ್ದಿದೆ. ಸ್ಥಳೀಯ ಪೊಲೀಸರು, ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

‘ಕಾರ್ಖಾನೆಯ ಡ್ರೈಯಿಂಗ್ ಘಟಕದಲ್ಲಿ ಒತ್ತಡ ಹೆಚ್ಚಾಗಿ ಸ್ಫೋಟ ಸಂಭವಿಸಿರುವ ಸಾಧ್ಯತೆಯಿದೆ ಇದೆ’ ಎಂದು ತೆಲಂಗಾಣ ರಾಜ್ಯ ವಿಕೋಪ ನಿರ್ವಹಣೆ ಮತ್ತು ಅಗ್ನಿಶಾಮಕ ಸೇವೆಗಳ ನಿರ್ದೇಶಕ ವೈ.ನಾಗಿ ರೆಡ್ಡಿ ತಿಳಿಸಿದ್ದಾರೆ.

₹ 2 ಲಕ್ಷ ಪರಿಹಾರ:

ಪ್ರಧಾನಿ ನರೇಂದ್ರ ಮೋದಿ ಅವರು ದುರಂತಕ್ಕೆ ಶೋಕ ವ್ಯಕ್ತಪಡಿಸಿದ್ದು, ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಹಾಗೂ ಗಾಯಾಳುಗಳಿಗೆ ₹ 50 ಸಾವಿರ ನಗದು ಪರಿಹಾರ ಘೋಷಿಸಿದ್ದಾರೆ.

ಔಷಧ ಘಟಕದಲ್ಲಿ ಸ್ಫೋಟ

ಘಟನೆಯಲ್ಲಿ 34 ಕಾರ್ಮಿಕರಿಗೆ ಗಾಯ 12 ಮಂದಿಯ ಸ್ಥಿತಿ ಗಂಭೀರ 5 ಕಿ.ಮೀ ದೂರದವರೆಗೂ ಕೇಳಿಸಿದ ಸ್ಫೋಟದ ಸದ್ದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.