ADVERTISEMENT

ಬಿಜೆಪಿಯಿಂದ ಟಿಆರ್‌ಎಸ್‌ ಶಾಸಕರ ಖರೀದಿ ಯತ್ನ: ವಿಡಿಯೊ ಬಿಡುಗಡೆ ಮಾಡಿದ ಕೆಸಿಆರ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ನವೆಂಬರ್ 2022, 9:31 IST
Last Updated 4 ನವೆಂಬರ್ 2022, 9:31 IST
   

ಹೈದರಾಬಾದ್‌: ಬಿಜೆಪಿಯು ಟಿಆರ್‌ಎಸ್‌ ಶಾಸಕರನ್ನು ಖರೀದಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಅವರು ಅದಕ್ಕೆ ಸಂಬಂಧಿಸಿದ ವಿಡಿಯೊ ಸಾಕ್ಷ್ಯವನ್ನು ಗುರುವಾರ ಬಿಡುಗಡೆ ಮಾಡಿದ್ದಾರೆ.

ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್)ಯ ನಾಲ್ವರು ಶಾಸಕರನ್ನು ಬಿಜೆಪಿಗೆ ಸೆಳೆಯಲು ಆಮಿಷವೊಡ್ಡುತ್ತಿರುವ ಮಧ್ಯವರ್ತಿಗಳ ಸಂಭಾಷಣೆ ವಿಡಿಯೊದಲ್ಲಿದೆ.

ಮಧ್ಯವರ್ತಿ ಸತೀಶ್ ಶರ್ಮಾ ಎಂಬಾತ, ಶಾಸಕರಿಗೆ ತಲಾ ₹ 50 ಕೋಟಿ ನೀಡುವುದಾಗಿ ಹೇಳುತ್ತಿರುವುದೂ ವಿಡಿಯೊದಲ್ಲಿ ದಾಖಲಾಗಿದೆ.

ADVERTISEMENT

‘ಪ್ರತಿಯೊಬ್ಬ ಶಾಸಕನಿಗೆ ₹ 50 ಕೋಟಿ ಖರ್ಚು ಮಾಡಲು ನಾವು ಸಿದ್ಧರಿದ್ದೇವೆ. ಬಿ.ಎಲ್‌ ಸಂತೋಷ್‌ ಅವರು ಅಮಿತ್‌ ಶಾ ಅವರೊಂದಿಗೆ ಸಭೆ ಏರ್ಪಡಿಸುತ್ತಾರೆ’ ಎಂಬ ಮಧ್ಯವರ್ತಿಗಳ ಮಾತನ್ನು ಉಲ್ಲೇಖಿಸಿ ಸಿಎಂ ಕೆಸಿಆರ್‌ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಟಿಆರ್‌ಎಸ್‌ ಶಾಸಕರಾದ ಜಿ. ಬಾಲರಾಜು, ಬಿ ಹರ್ಷವರ್ಧನ್ ರೆಡ್ಡಿ, ಆರ್ ಕಾಂತರಾವ್ ಮತ್ತು ರೋಹಿತ್ ರೆಡ್ಡಿ ಅವರಿಗೆ ಪಕ್ಷ ತೊರೆಯುವಂತೆ ಆಮಿಷವೊಡ್ಡುತ್ತಿದ್ದ ವೇಳೆ ದಾಳಿ ನಡೆಸಿದ್ದ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದರು. ಶಾಸಕರು ನೀಡಿದ್ದ ಮಾಹಿತಿ ಮೇರೆಗೆ ಅಕ್ಟೋಬರ್‌ 27ರಂದು ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

‘ಆಡಳಿತಾರೂಢ ಟಿಆರ್‌ಎಸ್ ಸರ್ಕಾರವನ್ನು ಉರುಳಿಸುವ ಸಲುವಾಗಿ ಬಿಜೆಪಿಯು ಟಿಆರ್‌ಎಸ್‌ನ ಸುಮಾರು 20ರಿಂದ 30 ಶಾಸಕರನ್ನು ಖರೀದಿಸಲು ಯತ್ನಿಸುತ್ತಿದೆ’ ಎಂದು ಸಿಎಂ ಕೆ. ಚಂದ್ರಶೇಖರ ರಾವ್ ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.